ಮಲಬಾರ್ ಗೋಲ್ಡ್ ಸಹಕಾರದಲ್ಲಿ ಶಾಲಾ ಶೌಚಾಲಯ ನಿರ್ಮಾಣ

Update: 2021-04-19 17:15 GMT

ಪಡುಬಿದ್ರಿ: ಪಡುಬಿದ್ರಿಯ ಸರ್ಕಾರಿ ಕೆಪಿಎಸ್ ಪದವಿ ಪೂರ್ವ ಕಾಲೇಜು ವಠಾರದಲ್ಲಿ ಮಲಬಾರ್ ಗೋಲ್ಡ್ ಚಾರಿಟೇಬಲ್ ಟ್ರಸ್ಟ್ ಮೂಲಕವಾಗಿ ಸುಮಾರು 1ಲಕ್ಷ ರೂ. ವೆಚ್ಚದಲ್ಲಿ ಹೆಣ್ಣು ಮಕ್ಕಳಿಗಾಗಿ ನಿರ್ಮಿಸಿರುವ ಎರಡು ಶೌಚಾಲಯಗಳನ್ನು ಸೋಮವಾರ ಶಾಸಕ ಲಾಲಾಜಿ ಆರ್. ಮೆಂಡನ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು,  ಸರ್ಕಾರಿ ಅನುದಾನದೊಂದಿಗೆ ಖಾಸಗಿ ಸಹಭಾಗಿತ್ವವನ್ನೂ ಬಳಸಿಕೊಂಡಾಗ ಸರಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ. ಚಿನ್ನಾಭರಣ ಹಾಗೂ ಡೈಮಂಡ್ ಮಳಿಗೆ ಮಲಬಾರ್‌ಗೋಲ್ಡ್ ಹಾಗೂ ಡೈಮಂಡ್ಸ್ ಅವರ ಮಲಬಾರ್ ಗೋಲ್ಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಂಸ್ಥೆಯು ಬಡವರ, ದೀನ ದಲಿತರ ಅಭಿವೃದ್ಧಿಗೆ ಶ್ರಮಿಸುತ್ತಿರುವುದನ್ನು ಶ್ಲಾಘಿಸಿದರು. ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ರಾಘವೇಂದ್ರ ನಾಯಕ್ ಮಾತನಾಡಿ, ಬಡ ಹೆಣ್ಮಕ್ಕಳ ವಿವಾಹ ಸಂದರ್ಭದಲ್ಲಿ 3 ಪವನು ಬಂಗಾರ, ಬಡ ಹೆಣ್ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ, ಮನೆ ನಿರ್ಮಾಣಕ್ಕೂ ಸಹಾಯಧನವನ್ನು ನೀಡಲಾಗುತ್ತಿದೆ. ನೇರವಾಗಿ ಅರ್ಹ ಫಲಾನುಭವಿಗಳು ತಮ್ಮ ವೆಬ್‌ಸೈಟ್ ಮೂಲಕ ಅಥವಾ ಸ್ವಯಂ ಹಾಜರಾಗಿ ಸಂಸ್ಥೆಯ ಕೊಡುಗೆಯನ್ನು ಸ್ವೀಕರಿಸಬಹುದೆಂದರು. ಇದೇ ಸಂದರ್ಭದಲ್ಲಿ 65 ವಿದ್ಯಾರ್ಥಿಗಳಿಗೆ ಮಲಬಾರ್ ಗೋಲ್ಡ್ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್‌ನ ಪ್ರಬಂಧಕ ಹಫೀಜ್ ರೆಹಮಾನ್ ಇದೇ ಸಂದರ್ಭದಲ್ಲಿ ದ್ವಿತೀಯ ಪಿಯು ಮೂರೂ ವಿಭಾಗಗಳಲ್ಲಿ ಶೇಕಡಾ 90 ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಸಂಸ್ಥೆಯು ವಿಶೇಷ ಕೊಡುಗೆಯನ್ನು ನೀಡುವುದಾಗಿ ಘೋಷಿಸಿದರು.

ಕ್ಷೇತ್ರ ಶಿಕ್ಷಣಾದಿಕಾರಿ ನಾಗೇಂದ್ರಪ್ಪ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು, ರೋಟರಿ ಕ್ಲಬ್ ಪಡುಬಿದ್ರಿ ಅಧ್ಯಕ್ಷ ಕೇಶವ ಸಾಲ್ಯಾನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ನೀತಾ ಗುರುರಾಜ್ ಮತ್ತಿತರರು ಉಪಸ್ಥಿತರಿದ್ದರು. ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಅನುರಾಧಾ ಸ್ವಾಗತಿಸಿದರು.

ಪ್ರಾಧ್ಯಾಪಕ ನವನೀತ ಅರಸ್ ಕಾರ್ಯಕ್ರಮವನ್ನು ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News