ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಆಡಳಿತ ವಿವಾದ: ದೇವಾಲಯ ನಿರ್ವಹಣೆಗೆ ಸಮಿತಿ ರಚನೆಗೆ ಸುಪ್ರೀಂ ಆದೇಶ

Update: 2021-04-19 18:18 GMT

ಕಾರವಾರ, ಎ.19: ಹಿಂದಿನ ಬಿಜೆಪಿ ಸರಕಾರ ರಾಮಚಂದ್ರಾಪುರ ಮಠಕ್ಕೆ ನೀಡಿದ್ದ ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ವಾಪಸ್ ಪಡೆಯುವಂತೆ ಸುಪ್ರೀಂ ಕೋರ್ಟ್ ಸೋಮವಾರ ರಾಜ್ಯ ಸರಕಾರಕ್ಕೆ ಆದೇಶಿಸಿದ್ದು ದೇವಾಲಯದ ನಿರ್ವಹಣೆಗಾಗಿಸಮಿತಿ ರಚಿಸುವಂತೆ ಸೂಚಿಸಿದೆ. ಭಾರತದಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠವು ಈ ಮಧ್ಯಂತರ ಆದೇಶ ಹೊರಡಿಸಿದೆ.

ಸುಪ್ರೀಂ ಕೋರ್ಟ್‌ನ ಈ ಆದೇಶದೊಂದಿಗೆ ದೇವಾಲಯದ ಆನುವಂಶಿಕ ಪುರೋಹಿತರು ಹಾಗೂ ರಾಮಚಂದ್ರಾಪುರ ಮಠದ ನಡುವಿನ ಹನ್ನೆರಡು ವರ್ಷಗಳ ಸುದೀರ್ಘ ವಿವಾದಕ್ಕೆ ಈಗ ವಿರಾಮ ಬಿದ್ದಿದೆ. ದೇವಾಲಯದ ಆಡಳಿತವನ್ನು ಮಠದಿಂದ ಹಿಂಪಡೆಯುವಂತೆ ಸರ್ವೋಚ್ಚ ನ್ಯಾಯಾಲಯ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ದೇವಾಲಯದ ನಿರ್ವಹಣೆಗಾಗಿ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಅದು ನಿರ್ದೇಶಿಸಿದೆ.ಸಮಿತಿಯಲ್ಲಿ ಉತ್ತರಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕುಮಟಾದ ಸಹಾಯಕ ಆಯುಕ್ತರು, ಇಬ್ಬರು ತಜ್ಞರು ಹಾಗೂ ರಾಜ್ಯ ಸರಕಾರ ನೇಮಿಸುವ ಇಬ್ಬರು ಉಪಾಧಿವಂತರು ಇರಲಿದ್ದಾರೆ.

ಮುಜರಾಯಿ ಇಲಾಖೆಯ ಆಡಳಿತದಲ್ಲಿದ್ದ ಈ ದೇಗುಲವನ್ನು 2004ರಲ್ಲಿ ಆಗಿನ ಟ್ರಸ್ಟಿವಿ.ಡಿ. ದೀಕ್ಷಿತ್ ನಿಧನದ ಬಳಿಕ 2008ರ ಆ.14ರವರೆಗೆ ಅವರ ಪುತ್ರ ಬಾಲಚಂದ್ರ ದೀಕ್ಷಿತ್ ಉಸ್ತುವಾರಿ ಆಡಳಿತ ನಡೆಸಿಕೊಂಡು ಬರುತ್ತಿದ್ದರು. ಆದರೆ 2008ರ ಮೇ ತಿಂಗಳಿನಲ್ಲಿ ಹೊಸನಗರದ ರಾಮಚಂದ್ರಾಪುರ ಮಠದವರು, ಈ ದೇವಸ್ಥಾನ ಪುರಾತನ ಕಾಲದಲ್ಲಿ ತಮ್ಮದಾಗಿತ್ತು ಎಂದು ಹಕ್ಕು ಮಂಡಿಸಿದ್ದರು.

ದೇವಾಲಯದಆಡಳಿತದ ನಿರ್ವಹಣೆಯನ್ನು ಪುನಃ ತಮಗೆ ವಹಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದರಿಂದ, 2008ರ ಆ.14ರಂದು ಸೂಚಿತ ಪಟ್ಟಿಯಿಂದ ದೇವಾಲಯವನ್ನು ರದ್ದುಪಡಿಸಿ, ರಾಮಚಂದ್ರಾಪುರ ಮಠಕ್ಕೆ ಆಗಲೂ ಮುಖ್ಯಮಂತ್ರಿ ಆಗಿದ್ದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಹಸ್ತಾಂತರ ಮಾಡಿತ್ತು. ರಾಮಚಂದ್ರಾಪುರ ಮಠದ ವಿರುದ್ಧ ತೀರ್ಪು ಇದನ್ನು ವಿರೋಧಿಸಿ ಬಾಲಚಂದ್ರ ದೀಕ್ಷಿತ್ ಹಾಗೂ ಇತರರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದ್ದರು.

10 ವರ್ಷಗಳವಿಚಾರಣೆಯ ಬಳಿಕ 2018ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠವು ರಾಮಚಂದ್ರಾಪುರ ಮಠದವಿರುದ್ಧ ತೀರ್ಪು ನೀಡಿತ್ತು.ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ಅವರ ನೇತೃತ್ವದಲ್ಲಿ ದೇವಸ್ಥಾನದ ನಿರ್ವಹಣೆಯನ್ನು ನೋಡಿಕೊಳ್ಳಲುಸಮಿತಿ ರಚಿಸುವಂತೆ ಸರಕಾರಕ್ಕೆ ಸೂಚಿಸಿತ್ತು. ಈ ತೀರ್ಪಿನ ವಿರುದ್ಧರಾಮಚಂದ್ರಾಪುರಮಠವು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದ್ದ ಕಾರಣ, ಸರಕಾರ ದೇವಸ್ಥಾನವನ್ನು ಮತ್ತೆ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತು. 8ನೇ ಶತಮಾನದಲ್ಲಿ ಗೋಕರ್ಣದಲ್ಲಿ ಮಠವನ್ನು ಸ್ಥಾಪಿಸಿದ್ದ ಆದಿಶಂಕರಾಚಾರ್ಯರು ದೇವಾಲಯದ ವ್ಯವಹಾರಗಳನ್ನು ನೋಡಿಕೊಳ್ಳುವಂತೆ ಮಠದವರಿಗೆ ಆದೇಶಿಸಿದ್ದರು ಎಂದು ಅರ್ಜಿದಾರ ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತಿ ಸ್ವಾಮೀಜಿಯವರು ಸುಪ್ರೀಂಕೋರ್ಟ್‌ನಲ್ಲಿವಾದ ಮಂಡಿಸಿದ್ದರು. ದೇವಸ್ಥಾನ ರಾಮಚಂದ್ರಾಪುರ ಮಠಕ್ಕೆ ಸೇರಿದ್ದೆಂಬುದನ್ನು ಸಾಬೀತುಪಡಿಸುವ ಯಾವುದೇ ಪುರಾವೆಗಳಿಲ್ಲವೆಂದು ಸಿಜೆಐ ಬೋಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್ ಬೋಪಣ್ಣ ಹಾಗೂವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸೋಮವಾರದ ಆದೇಶದಲ್ಲಿ ತಿಳಿಸಿದೆ. ಈ ಪ್ರಕರಣದಲ್ಲಿ ಅಂತಿಮ ತೀರ್ಮಾನ ಪ್ರಕಟಿಸುವುದು ಬಾಕಿಯಿದ್ದು, ಅಲ್ಲಿಯವರೆಗೆ ದೇವಾಲಯದ ಹಾಗೂ ಭಕ್ತರ ಹಿತದೃಷ್ಟಿಯಿಂದ ಸ್ವತಂತ್ರಸಮಿತಿಗೆ ದೇವಾಲಯದಆಡಳಿತ ನಿರ್ವಹಣೆಯನ್ನು ವಹಿಸುವುದು ಸೂಕ್ತವೆಂದು ನ್ಯಾಯಪೀಠ ಅಭಿಪ್ರಾಯಿಸಿತು.

ಈ ಪ್ರಕರಣ ಸಂಬಂಧ ಮಧ್ಯಂತರ ವ್ಯವಸ್ಥೆ ಮಾಡುವ ಸಲುವಾಗಿ ನಿವೃತ್ತ ನ್ಯಾ. ಬಿ.ಎನ್ ಶ್ರೀಕೃಷ್ಣ ನೇತೃತ್ವದಸಮಿತಿಯನ್ನು ಮರುರಚಿಸಿ, ಗೋಕರ್ಣಮಹಾಬಲೇಶ್ವರ ದೇವಾಲಯಆಡಳಿತದ ಉಸ್ತುವಾರಿಯನ್ನು ಸಮಿತಿಗೆವಹಿಸಿದೆ. 15 ದಿನಗಳ ಒಳಗೆ ದೇವಾಲಯವನ್ನು ಸರ್ಕಾರಕ್ಕೆಹಸ್ತಾಂತರಿಸುವಂತೆ ನೋಡಿಕೊಳ್ಳಬೇಕು ಮತ್ತು ದೇವಾಲಯದ ನಿರ್ವಹಣೆಗಾಗಿತಕ್ಷಣವೇ ಸಮಿತಿಯನ್ನು ರಚಿಸಬೇಕೆಂದು ಸೋಮವಾರದ ತನ್ನ ಆದೇಶದಲ್ಲಿ ಹೇಳಿದೆ.

ಗೋಕರ್ಣದಲ್ಲಿಸಂಭ್ರಮಾಚರಣೆ: ಸುಪ್ರೀಂ ಕೋರ್ಟ್ ಆದೇಶಬರುತ್ತಿದ್ದಂತೆ ಅನುವಂಶೀಯ ಅರ್ಚಕರು ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದರು. ಈ ಹಿನ್ನೆಲೆಯಲ್ಲಿ ಸಿಹಿ ತಿಂಡಿಗಳನ್ನು ಹಂಚಿ ದೇಗುಲದ ಬಳಿ ಪಟಾಕಿಸಿಡಿಸಿ, ಸಂಭ್ರಮಿಸಿದರು.

ಸುಪ್ರೀಂಕೋರ್ಟ್‌ನ ಮಧ್ಯಂತರ ತೀರ್ಪನ್ನು ನಾವು ಗೌರವಿಸುತ್ತೇವೆ. ಗೋಕರ್ಣದ ಮಹಾಬಲೇಶ್ವರ ದೇವಾಲಯದಿಂದ ಹಣ - ಅಧಿಕಾರ - ಪ್ರತಿಷ್ಠೆ ಇಂಥ ಯಾವ ಪ್ರತಿಫಲಾಪೇಕ್ಷೆಯೂ ನಮಗೆ ಇರಲಿಲ್ಲ. ಇದನ್ನು ಕೇವಲಸೇವೆಯ ಸಾಧನವಾಗಿ ನಾವು ಪರಿಗಣಿಸಿದ್ದೆವು. ಪರಂಪರೆಯಸಂಬಂಧ ಇರುವುದರಿಂದಮತ್ತು ಸಮಾಜದ ಹಿತಕ್ಕಾಗಿಶ್ರೀಮಠಗೋಕರ್ಣ ದೇವಾಲಯದ ಕಾನೂನು ಹೋರಾಟ ಕೈಗೆತ್ತಿಕೊಂಡಿತ್ತು. ಇದನ್ನು ಮುಂದುವರಿಸಲಿದೆ.

ರಾಘವೇಶ್ವರಭಾರತೀ ಸ್ವಾಮೀಜಿ, ಶ್ರೀರಾಮಚಂದ್ರಾಪುರ ಮಠ
 

ನ್ಯಾಯಾಲಯದ ಈ ಆದೇಶವು ದೇವಾಲಯದ ಅರ್ಚಕರು ಹಾಗೂ ಯಾಜಕರಲ್ಲಿ ಸಂತಸತಂದಿದೆ. ನಮ್ಮ ಪೂರ್ವಜರು ಮಹಾಬಲೇಶ್ವರ ದೇವಸ್ಥಾನದಲ್ಲಿ ಶತಮಾನಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದರು. ಇದೀಗ ಮತ್ತೆ ತಮಗೆ ದೇವಾಲಯದ ನಿರ್ವಹಣೆಸಿಕ್ಕಿದೆ. ತೀರ್ಪಿನ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ.

 ರಾಜಗೋಪಾಲ್ ಅಡಿ, ಅರ್ಚಕ, ಅರ್ಜಿದಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News