ಓಟ ನಿಲ್ಲಿಸಿದ 28 ವರ್ಷ ಪ್ರಾಯದ ಪ್ರಶಸ್ತಿಗಳ ಸರದಾರ: ಕಂಬಳ ಗದ್ದೆಯ ‘ಬೋಳಂತೂರು ಕಾಟಿ’ ಸಾವು

Update: 2021-04-20 04:24 GMT

ಬಂಟ್ವಾಳ: ಹತ್ತಾರು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಕಂಬಳ ಗದ್ದೆಯ ‘ಬೋಳಂತೂರು ಕಾಟಿ’ ಎಂದೇ ಪ್ರಸಿದ್ಧಿ ಪಡೆದಿದ್ದ ಬಂಟ್ವಾಳ ತಾಲೂಕಿನ ಬೋಳಂತೂರು ನಿವಾಸಿ ದಿ. ಗಂಗಾಧರ ರೈ ಯಜಮಾನಿಕೆಯ ಕೋಣ ಸಾವನ್ನಪ್ಪಿದೆ. ಕಂಬಳ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಸುಮಾರು 28 ವರ್ಷ ವಯಸ್ಸಿನ ‘ಬೋಳಂತೂರು ಕಾಟಿ’ ಕೋಣ ಹಲವು ಪ್ರಶಸ್ತಿಗಳ ಸರದಾರ. ಇತ್ತೀಚಿನ ಹಲವು ವರ್ಷಗಳಿಂದ ಕಂಬಳ ಕ್ಷೇತ್ರದಿಂದ ದೂರವಾಗಿದ್ದ ಈ ಕಾಟಿ ಬೋಳಂತೂರಿನಲ್ಲಿ ರವಿವಾರ ತಡರಾತ್ರಿ ಅಸುನೀಗಿದೆ.

3 ವರ್ಷಗಳ ಹಿಂದೆ ಪುತ್ತೂರು ಕಂಬಳದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ‘ಬೋಳಂತೂರು ಕಾಟಿ’ಗೆ 25 ವರ್ಷ ತುಂಬಿದ ಸವಿನೆನಪಿಗಾಗಿ ಅದ್ದೂರಿಯಾಗಿ ಸಮ್ಮಾನ ಮಾಡಲಾಗಿತ್ತು. ಬಾರ್ಕೂರು ದೇವದಾಸ ಗಡಿಯಾರ್ ಈ ಕಾಟಿಯನ್ನು ಬಾಲ್ಯದಲ್ಲಿ ಪೋಷಿಸಿದ್ದು ನೇಗಿಲು ಕಿರಿಯ ವಿಭಾಗದಲ್ಲಿ ಶಿರ್ವ ಕಂಬಳದಲ್ಲಿ ಮೊದಲ ಬಹುಮಾನ ಪಡೆದಿತ್ತು. ಅಂದು ಶಿರ್ವ ವಿಶ್ವನಾಥ ಪ್ರಭು ಕಾಟಿಯನ್ನು ಓಡಿಸಿದ್ದರು. ಬಳಿಕ ಬಾರ್ಕೂರು ಶಾಂತಾರಾಮ ಶೆಟ್ಟಿ ಗರಡಿಯಲ್ಲಿ ಇದು ಪಳಗಿತ್ತು. ಬಾರ್ಕೂರು ಶಾಂತಾರಾಮ ಶೆಟ್ಟಿ ಹಾಗೂ ದೇವದಾಸ ಗಡಿಯಾರ್ ಜತೆ ಸೇರಿ ಮೋಡ ಕೋಣದ ಜೋಡಿಯಾಗಿ ಈ ಕಾಟಿಯನ್ನು ಓಡಿಸಿದ್ದರು. ಸೀನಿಯರ್ ವಿಭಾಗಕ್ಕೆ ಅರ್ಹತೆ ಪಡೆಯುವ ಮೊದಲೇ ಚಾಂಪಿಯನ್ ಗೌರವಕ್ಕೆ ಪಾತ್ರವಾಗಿತ್ತು. ಮುಂದೆ ಬೆಳುವಾಯಿ ಸದಾನಂದ ಶೆಟ್ಟಿ ಈ ಕಾಟಿಯನ್ನು ತಮ್ಮ ಬಳಗಕ್ಕೆ ಸೇರಿಸಿ ಅವರ ಮಾತಿಬೆಟ್ಟು ಕೋಣದ ಜೊತೆ ಸೇರಿಸಿ ಹಗ್ಗ ಹಿರಿಯ ವಿಭಾಗದಲ್ಲಿ ಓಡಿಸಿದ್ದರು.

2001ರಲ್ಲಿ ಬೋಳಂತೂರು ಗಂಗಾಧರ ರೈ ಕಾಟಿ -ಮಾತಿಬೆಟ್ಟು ಜೋಡಿಯನ್ನು ಖರೀದಿಸಿದ್ದು ಪ್ರಾರಂಭದ ಎರಡು ವರ್ಷ ಅಜಿತ್ ಕುಮಾರ್ ಜೈನ್ ಈ ಜೋಡಿಯನ್ನು ಓಡಿಸಿದ್ದರು. ಬಳಿಕ ಅಶೋಕ್ ಕುಮಾರ್ ಜೈನ್ ಓಡಿಸಿದ್ದು ಈ ಸಂದರ್ಭ ಸತತ ಮೂರು ವರ್ಷಗಳ ಕಾಲ ಚಾಂಪಿಯನ್ ಆಫ್ ದಿ ಇಯರ್ ಪ್ರಶಸ್ತಿ ಪಡೆದಿತ್ತು. ಬಳಿಕ ಮಂಜೇಶ್ವರ ಉದ್ಯಾವರ, ಮುನ್ನೆ, ಚಿತ್ರಾಪುರದ ಕುಟ್ಟಿ, ಬಿಳಿಯೂರು, ಗಂಗೆ ಮೊದಲಾದ ಕೋಣಗಳಿಗೆ ಜೋಡಿಯಾಗಿ ಪ್ರಶಸ್ತಿ ಪಡೆದಿದ್ದು ಹಲವು ಮಂದಿ ಕಂಬಳ ಓಟಗಾರರು ಓಡಿಸಿದ್ದರು. ‘ಬೋಳಂತೂರು ಕಾಟಿ’ಯು ಕನೆಹಲಗೆ ವಿಭಾಗದಲ್ಲೂ ಪ್ರಶಸ್ತಿ ಪಡೆದು ಮಿಂಚಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News