ಪುತ್ತೂರು: ಎಸೆಸೆಲ್ಸಿ ವಿದ್ಯಾರ್ಥಿಗಳ ಮನೆಗೆ ಇಮಾಮರ ಭೇಟಿ

Update: 2021-04-20 04:41 GMT

ಮಂಗಳೂರು: ಪುತ್ತೂರು ತಾಲೂಕಿನ ಎಸೆಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗೆ ಸ್ಫೂರ್ತಿ ನೀಡಲು ಕಳೆದ ಕೆಲವು ಸಮಯಗಳಿಂದ ಮಸೀದಿಯ ಇಮಾಮರು ಮನೆ ಮನೆಗೆ ಭೇಟಿ ನೀಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪುತ್ತೂರಿನ ಕಮ್ಯುನಿಟಿ ಸೆಂಟರ್ ಮೂಲಕ ಉಸ್ತಾದರು ಹಮ್ಮಿಕೊಂಡ ಜಾಗೃತಿ ಮೂಡಿಸುವ ಅಭಿಯಾನ-ಆಂದೋಲನಕ್ಕೆ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಹಲವು ಮಸೀದಿಗಳ ಮೌಲಾನಗಳು ಎಸೆಸೆಲ್ಸಿ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಕಲಿಕೆಗೆ ಪ್ರೇರಣೆ ನೀಡುವುದು, ಕಲಿಕೆಯ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವುದು, ಶಿಕ್ಷಣದ ಮಹತ್ವ ಸಾರುವುದನ್ನು ಗಮನಿಸಿ ತುಂಬಾ ಸಂತೋಷವಾಗಿದೆ. ಮೌಲಾನಗಳ ಈ ವಿಭಿನ್ನ ಯೋಚನೆಯು ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಆಗಬೇಕಾಗಿದೆ. ಶೈಕ್ಷಣಿಕ ಅಭಿವೃದ್ಧಿಯ ಆಂದೋಲಕ್ಕೆ ಮೌಲಾನಗಳ ಈ ಅನುಕರಣೀಯ ಪ್ರಯತ್ನಕ್ಕೆ ಶಿಕ್ಷಣ ಇಲಾಖೆ ಮತ್ತು ಸರಕಾರ ಸಂಪೂರ್ಣ ಸಹಕಾರ ನೀಡುವುದಾಗಿ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಪುತ್ತೂರು ತಾಲೂಕು ಶಿಕ್ಷಣಾಧಿಕಾರಿ ಲೊಕೇಶ್ ಎಸೆಸೆಲ್ಸಿ ಕಲಿಯುವ ಸುಮಾರು 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಅವರ ಕಲಿಕೆಯ ಉನ್ನತಿಗೆ ಶ್ರಮಿಸುತ್ತಿರುವುದನ್ನು ಗಮನಿಸಿದ ಕಮ್ಯುನಿಟಿ ಸೆಂಟರ್‌ನ ಹನೀಫ್ ಪುತ್ತೂರು ಮತ್ತು ಇಮ್ತಿಯಾಝ್ ಸ್ಥಳೀಯ ಜಮಾಅತ್ ಆಡಳಿತ ಕಮಿಟಿಯ ಸಹಕಾರದೊಂದಿಗೆ ಕೂರ್ನಡ್ಕ ಮೊಹಲ್ಲಾ ಖಾಝಿ ಅಲ್‌ಹಾಜ್ ಅಬ್ದುಲ್ ಖಾದರ್ ಅಲ್‌ಖಾಸಿಮಿ ಬಂಬ್ರಾಣ ಉಸ್ತಾದ್, ಬನ್ನೂರು ಮಸೀದಿಯ ಖತೀಬ್ ಮಜೀದ್ ಸಖಾಫಿ ಮಲ್ಲಿ, ಕಲ್ಲೇಗ ಮಸೀದಿಯ ಖತೀಬ್ ಅಬೂಬಕರ್ ಸಿದ್ದೀಕ್ ಜಲಾಲಿ, ಬಳ್ನಾಡ್ ಮಸೀದಿಯ ಖತೀಬ್ ನಿಯಾಝ್ ದಾರಿಮಿ ಮತ್ತಿತರರು 11 ಶಾಲೆಗಳಲ್ಲಿ ಪ್ರೇರಣಾ ಶಿಬಿರ, ಸ್ಟಡಿ ಸ್ಕಿಲ್ ಟ್ರೈನಿಂಗ್, ಪರೀಕ್ಷೆಯನ್ನು ಎದುರಿಸುವ ಸಾಮರ್ಥ್ಯದ ತರಬೇತಿ ನೀಡಿದ್ದಾರೆ. ಇದರಿಂದ ಸುಮಾರು 1,300 ವಿದ್ಯಾರ್ಥಿಗಳು ಪ್ರಯೋಜ ಪಡೆದಿದ್ದಾರೆ. ಇದಕ್ಕೆ ಶಿಕ್ಷಣಾಧಿಕಾರಿ ಲೋಕೇಶ್ ಕೂಡ ಸಾಥ್ ನೀಡಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾದ ಉಮರ್ ಯು.ಎಚ್., ರಫೀಕ್ ಮಾಸ್ಟರ್ ಮತ್ತು ಮೌಲಾನ ಅಝಾದ್ ಶಾಲೆಯ ಪ್ರಾಂಶುಪಾಲ ತೌಫೀಕ್ ಪ್ರೇರಣಾ ಶಿಬಿರ ನಡೆಸಿ ಕೊಡುತ್ತಿದ್ದಾರೆ.

ಸಮುದಾಯದ ಭವಿಷ್ಯದ ಹಿತದೃಷ್ಟಿಯಿಂದ ಮಕ್ಕಳಿಗೆ ಸಕಾಲಕ್ಕೆ ಮಾರ್ಗದರ್ಶನ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕಾಗಿ ನಾವೆಲ್ಲಾ ಸೇರಿ ಮನೆ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದೇವೆ. ನಮ್ಮ ಉದ್ದೇಶ ಈಡೇರುವ ವಿಶ್ವಾಸವಿದೆ.

ಅಬೂಬಕರ್ ಸಿದ್ದೀಕ್ ಜಲಾಲಿ

ಖತೀಬ್, ಕಲ್ಲೆಗ ಜುಮಾ ಮಸೀದಿ

ಕೊರೋನ ಕಾಲದ ಸುದೀರ್ಘ ರಜೆಯಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಮತ್ತು ಕಲಿಕಾ ಸಾಮರ್ಥ್ಯದ ಕೊರತೆ ಎದ್ದು ಕಾಣುತ್ತಿರುವುದನ್ನು ಮನಗಂಡ ನಾನು ಶಿಕ್ಷಕರ ಸಹಕಾರದಿಂದ ಎಸೆಸೆಲ್ಸಿ ವಿದ್ಯಾರ್ಥಿಗಳ ಮನೆ ಮನೆಗೆ ಭೇಟಿ ನೀಡಿ ಕಲಿಕೆಗೆ ಉತ್ತೇಜನ ನೀಡುವುದನ್ನು ಕಂಡ ಸಾಮಾಜಿಕ ಕಳಕಳಿಯ ಸ್ಥಳೀಯ ಮುಸ್ಲಿಮರು ನಮ್ಮ ಜೊತೆ ಕೈ ಜೋಡಿಸಿದರು. ಅವರೊಂದಿಗೆ ಮಸೀದಿಯ ಧರ್ಮಗುರುಗಳು ಕೂಡ ಮನೆ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿರುವುದು ಒಳ್ಳೆಯ ಬೆಳವಣಿಗೆ.

 ಲೋಕೇಶ್, ಶಿಕ್ಷಣಾಧಿಕಾರಿ ಪುತ್ತೂರು ತಾಲೂಕು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News