ವಲಸೆ ಕಾರ್ಮಿಕರಲ್ಲಿ ಆತ್ಮವಿಶ್ವಾಸ ತುಂಬಲು ಕ್ರಮ ಕೈಗೊಳ್ಳಿ: ಕ್ರೆಡೈಯಿಂದ ದ.ಕ. ಜಿಲ್ಲಾಡಳಿತಕ್ಕೆ ಮನವಿ

Update: 2021-04-20 07:25 GMT
ಪುಪ್ಷರಾಜ್ ಜೈನ್, ಅಧ್ಯಕ್ಷರು ಕ್ರೆಡೈ ಮಂಗಳೂರು

ಮಂಗಳೂರು, ಎ.20: ಕೊರೋನ 2ನೇ ಅಲೆಯಿಂದ ಭೀತಿಗೊಳಗಾಗಿರುವ ಮಂಗಳೂರಿನಲ್ಲಿರುವ ವಲಸೆ ಕಾರ್ಮಿಕರನ್ನು ಸಾಂತ್ವನಗೊಳಿಸಿ ಅವರಲ್ಲಿ ಆತ್ಮವಿಶ್ವಾಸ ತುಂಬಲು ಕ್ರಮ ಕೈಗೊಳ್ಳುವಂತೆ ಕ್ರೆಡೈ ಮಂಗಳೂರು ಇದರ ಅಧ್ಯಕ್ಷ ಪುಪ್ಷರಾಜ್ ಜೈನ್ ಅವರು ದ.ಕ. ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಈ ಬಗ್ಗೆ ದ.ಕ. ಜಿಲ್ಲಾಧಿಕಾರಿಗೆ ಮನವಿ ಮಾಡಿರುವ ಜೈನ್, ಕೊರೋನ ಎರಡನೇ ಅಲೆಯು ಜನಸಾಮಾನ್ಯರನ್ನು ಭಯಭೀತಿಗೊಳಿಸಿದೆ. ಇದರಿಂದಾಗಿ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರು ಮಂಗಳೂರಿನಲ್ಲಿ ಲಾಕ್ಡೌನ್ ಭಯದಿಂದ ತಮ್ಮ ಊರುಗಳಿಗೆ ತೆರಳಲು ಸಿದ್ಧತೆಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ವಲಸೆ ಕಾರ್ಮಿಕರನ್ನು ಉಳಿಸಿಕೊಳ್ಳಲು ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಪ್ರಯತ್ನಿಸದಿದ್ದರೆ, ಮುಂಬರುವ ದಿನಗಳಲ್ಲಿ ಕಾರ್ಮಿಕರ ತೀವ್ರ ಕೊರತೆ ಉಂಟಾಗುವ ಸಂಭವ ಇದೆ. ಇದು ನಿರ್ಮಾಣ ಕಾಮಗಾರಿ ಯೋಜನೆಗಳು ಸಮಯಕ್ಕೆ ಮೀರಿರುವುದರಿಂದ ಮತ್ತು ಯೋಜನೆಗಳನ್ನು ಪೂರ್ಣಗೊಳಿಸಲು ಯಾವುದೇ ವಿಳಂಬವು ಭಾರಿ ದಂಡ ಮತ್ತು ಕಾನೂನು ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಕಾರ್ಮಿಕರಿಗೆ ಅಗತ್ಯವಾದ ವೈದ್ಯಕೀಯ ನೆರವು, ಆಹಾರ, ಆಶ್ರಯವನ್ನು ಒದಗಿಸಲು ಬಿಲ್ಡರ್ ಗಳು ಸಿದ್ಧವಾಗಿದ್ದಾರೆ. ಜಿಲ್ಲಾಡಳಿತವೂ ವಲಸೆ ಕಾರ್ಮಿಕರನ್ನು ಸಾಂತ್ವನಗೊಳಿಸಬೇಕು ಮತ್ತು ಆತ್ಮವಿಶ್ವಾಸ ತುಂಬಲು ಕಾರ್ಯಕ್ರಮ ರೂಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News