ಮಸೀದಿಗಳಲ್ಲಿ ಕೊರೋನ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮನವಿ

Update: 2021-04-20 07:35 GMT
ಇಬ್ರಾಹೀಂ ಸಾಹೇಬ್ ಕೋಟ

ಉಡುಪಿ, ಎ.20: ಕೋವಿಡ್-19 ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಜಾರಿಗೊಳಿಸಿದ ಮಾರ್ಗಸೂಚಿ ಆದೇಶವನ್ನು ಜಿಲ್ಲೆಯ ಎಲ್ಲ ಮಸೀದಿಗಳಲ್ಲಿ ಪಾಲನೆ ಮಾಡುವ ಮೂಲಕ ಸಮುದಾಯದ, ಸಮಾಜದ ಮತ್ತು ದೇಶದ ಆರೋಗ್ಯ ಕಾಪಾಡಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮನವಿ ಮಾಡಿದೆ. 

ಮತ್ತೊಮ್ಮೆ ಕೋವಿಡ್-19 ನಮಗೆ ಎದುರಾಗಿದೆ. ಈ ಹಿಂದಿನಂತೇ ಸಾಕಷ್ಟು ಮುತುವರ್ಜಿಯಿಂದ ಮುಂಜಾಗೃತೆ ವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪವಿತ್ರ ರಮಝಾನ್ ತಿಂಗಳ ವ್ರತಾಚರಣೆಯ ಸಮಯವಾಗಿರುವ ಈ ದಿನಗಳಲ್ಲಿ ಮಸೀದಿಗಳಲ್ಲಿ ಈ ಹಿಂದಿನಂತೆ ಕಟ್ಟುನಿಟ್ಟಿನ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಕೋವಿಡ್ ಎರಡನೇ ಅಲೆ ಹರಡುವುದನ್ನು ತಡೆಯಬಹುದಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಇಬ್ರಾಹೀಂ ಸಾಹೇಬ್ ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಆದುದರಿಂದ ಮಸೀದಿ ಜಮಾಅತ್ ಗಳು ಮತ್ತು ಸ್ವಯಂಸೇವಕರು ಮಸೀದಿಗೆ ಬರುವ ಪ್ರಾರ್ಥನಾರ್ಥಿಗಳ ಟೆಂಪರೇಚರ್, ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ -ಮುಸಲ್ಲಾ ಮತ್ತು ನಮಾಝ್ ನಿರ್ವಹಿಸುವವರ ನಡುವಿನ ಅಂತರ ಇತ್ಯಾದಿಗಳ ಬಗ್ಗೆ ನಿಗಾ ಇರಿಸಬೇಕು. ವಯೋವೃದ್ಧರು ಮತ್ತು ಮಕ್ಕಳು ಮನೆಯಲ್ಲಿಯೇ ನಮಾಝ್ ನಿರ್ವಹಿಸಬೇಕು. ಉಳಿದಂತೆ ಮುಸಲ್ಲಿಗಳು ಮಸೀದಿಯ ಮೇಲ್ವಿಚಾರಕರೊಂದಿಗೆ ಸಂಪೂರ್ಣವಾಗಿ ಸಹಕರಿಸುವ ಮೂಲಕ ಸರಳವಾದ ಆರೋಗ್ಯ ಪೂರ್ಣ ರಮಝಾನ್ ವ್ರತಾಚರಣೆ ಕೈಗೊಳ್ಳಬೇಕು ಎಂದು ಅವರು ವಿನಂತಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News