ಪ್ರತಿಭಟನೆಯ ಹೆಸರಿನಲ್ಲಿ ರಸ್ತೆಗಳಿಗೆ ದೀರ್ಘಕಾಲ ಅಡ್ಡಿಯುಂಟು ಮಾಡಲಾಗದು: ರೈತರಿಗೆ ಹೇಳಿದ ಸುಪ್ರೀಂ ಕೋರ್ಟ್

Update: 2021-04-20 15:29 GMT

ಹೊಸದಿಲ್ಲಿ: ತಮ್ಮ ಪ್ರತಿಭಟನೆಗಾಗಿ ರಸ್ತೆಗಳಿಗೆ ತಡೆಯೊಡ್ಡುವುದನ್ನು ಮುಂದುವರಿಸಬೇಕೇ ಎಂಬುದನ್ನು ಪರಾಮರ್ಶಿಸುವಂತೆ ಕೇಂದ್ರದ ಮೂರು ಕೃಷಿ ಕಾಯಿದೆಗಳ ವಿರುದ್ಧ ಹೋರಾಡುತ್ತಿರುವ ರೈತ ನಾಯಕರನ್ನು ಸುಪ್ರೀಂ ಕೋರ್ಟ್ ಸೋಮವಾರ ಕೇಳಿದೆ. ಸಾರ್ವಜನಿಕ ರಸ್ತೆಗಳಲ್ಲಿ ಮುಕ್ತವಾಗಿ ಸಂಚರಿಸುವ ಸ್ಥಳೀಯರ ಹಕ್ಕುಗಳಿಗೆ  ಪ್ರತಿಭಟನಾಕಾರರು ಅಡ್ಡಿಯಾಗಿದ್ದಾರೆಯೇ ಎಂಬುದನ್ನೂ ಪರಾಮರ್ಶಿಸುವಂತೆ ನ್ಯಾಯಾಲಯ ರೈತ ನಾಯಕರಿಗೆ ಹೇಳಿದೆ.

ರೈತರ ಪ್ರತಿಭಟನೆಯಿಂದಾಗಿ ನೊಯ್ಡಾದಿಂದ ದಿಲ್ಲಿಗೆ ತೆರಳಲು ತನಗೆ 20 ನಿಮಿಷಗಳ ಬದಲು ಎರಡು ಗಂಟೆಗಳು ತಗಲುತ್ತದೆ ಎಂದು ದೂರು ಮೋನಿಕಾ ಅಗರ್ವಾಲ್ ಎಂಬವರು ಸಲ್ಲಿಸಿದ ಅಪೀಲಿನಲ್ಲಿ ದೂರಿದ್ದರು. ದಿಲ್ಲಿಯ ಶಾಹೀನ್ ಬಾಗ್ ಪ್ರತಿಭಟನೆ ಸಹಿತ ಇತರ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಗಳನ್ನು ಪಾಲಿಸಲಾಗಿಲ್ಲ ಎಂದೂ ಅವರು ತಮ್ಮ ಅಪೀಲಿನಲ್ಲಿ ದೂರಿದ್ದರು.

"ಒಂದು ನಿರ್ದಿಷ್ಟ ನೀತಿಯ ಬಗ್ಗೆ ನಿಮ್ಮ ವಿರೋಧ ಇದೆಯೆಂದ ಮಾತ್ರಕ್ಕೆ  ನೀವು ಇತರರ ಹಾದಿಗೆ ಅಡ್ಡಿಯುಂಟು ಮಾಡಿ ಅವರಿಗೆ ಸಮಸ್ಯೆ ಸೃಷ್ಟಿಸುವ ಹಾಗಿಲ್ಲ" ಎಂದು ಜಸ್ಟಿಸ್ ಸಂಜಯ್ ಕಿಶನ್ ಕೌಲ್ ಹಾಗೂ ಜಸ್ಡಿಸ್ ಹೇಮಂತ್ ಗುಪ್ತಾ ಅವರ ಪೀಠ ಹೇಳಿದೆ.

ದಿಲ್ಲಿ ಪೊಲೀಸರು ಇದೀಗ ರೈತರ ಪ್ರತಿಭಟನೆಗಳಿಗಿಂತ ಹೆಚ್ಚಾಗಿ ಕೋವಿಡ್ ಪರಿಸ್ಥಿತಿಗೆ ಆದ್ಯತೆ ನೀಡುತ್ತಿರುವುದರಿಂದ  ಈ ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡುವಂತೆ ಸರಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದರು.

"ನಿಮಗೆ ಸಮಯ ನೀಡಲಾಗುವುದು.  ಆದರೆ ನಮ್ಮ ಆತಂಕವನ್ನೂ ನಾವು ತೋಡಿಕೊಳ್ಳುತ್ತೇವೆ. ಜನರಿಗೆ ಪ್ರತಿಭಟಿಸುವ ಹಕ್ಕು ಇರಬಹುದು, ಆದರೆ ರಸ್ತೆಗಳನ್ನು ತಡೆದು  ಸಮಾಜದ ಹಲವರಿಗೆ ಸಮಸ್ಯೆ ಉಂಟು ಮಾಡುವ ಕುರಿತು ನಮಗೆ ಕಳವಳವಿದೆ" ಎಂದು ಜಸ್ಟಿಸ್ ಕೌಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News