ಅರಬಿ ಸಮುದ್ರದಲ್ಲಿ ಬೋಟ್ ದುರಂತ: ವಾರವಾದರೂ ಪತ್ತೆಯಾಗದ 6 ಮಂದಿ ಮೀನುಗಾರರು

Update: 2021-04-20 15:06 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಎ.19: ಅರಬಿ ಸಮುದ್ರದಲ್ಲಿ ನಡೆದ ಬೋಟ್ ದುರಂತದಲ್ಲಿ ಕಣ್ಮರೆಯಾಗಿರುವ 6 ಮಂದಿ ಮೀನುಗಾರರು ಒಂದು ವಾರವಾದರೂ ಕೂಡ ಪತ್ತೆಯಾಗಿಲ್ಲ. ಇದು ಕಣ್ಮರೆಯಾಗಿರುವ ಮೀನುಗಾರರ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿಸಿದೆ.

ಈ ಆರು ಮಂದಿಯ ಪತ್ತೆಗಾಗಿ ಕರಾವಳಿ ಕಾವಲು ಪೊಲೀಸ್ ಪಡೆ, ಕೋಸ್ಟ್‌ಗಾರ್ಡ್ ಸೇರಿದಂತೆ ಕಾರವಾರದ ನೌಕಾ ನೆಲೆಯ ಹಡಗು ಹಾಗೂ ಹೆಲಿಕಾಪ್ಟರ್ ಶೋಧ ಕಾರ್ಯವನ್ನು ಮಂಗಳವಾರವೂ ನಡೆಸಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಮಂಗಳೂರಿನಲ್ಲೇ ಅಂತ್ಯಕ್ರಿಯೆ: ದುರ್ಘಟನೆಯಲ್ಲಿ ಮೃತಪಟ್ಟ ಪಶ್ಚಿಮ ಬಂಗಾಳ ಮೂಲದ ಇಬ್ಬರು ಮೀನುಗಾರರಾದ ಸುಬಲ್ ದಾಸ್ (45) ಮತ್ತು ಇನ್ನೋರ್ವ ಸುಬುಲ್ ದಾಸ್ (38)ರ ಅಂತ್ಯಕ್ರಿಯೆಯನ್ನು ಸೋಮವಾರ ನಗರದ ಅತ್ತಾವರ ನಂದಿಗುಡ್ಡೆ ಸ್ಮಶಾನ ಭೂಮಿಯಲ್ಲಿ ನಡೆಸಲಾಯಿತು. ಈ ಇಬ್ಬರ ಕುಟುಂಬವು ಆರ್ಥಿಕವಾಗಿ ಶೋಚನೀಯ ಸ್ಥಿತಿಯಲ್ಲಿದ್ದು, ಮೃತದೇಹವನ್ನು ಕೊಂಡೊಯ್ಯಲು ಸಾಧ್ಯವಾಗದ ಕಾರಣ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಎ.10ರಂದು ಕೇರಳದಿಂದ ಆಳ ಸಮುದ್ರ ಮೀನುಗಾರಿಕೆಗೆ ಹೊರಟಿದ್ದ 'ರಬಾ' ಹೆಸರಿನ ಬೋಟ್ ಮುಂಬೈ ಕಡೆಗೆ ಸಾಗುತ್ತಿದ್ದ ಸರಕು ಸಾಗಣೆಯ ಹಡಗಿಗೆ ಎ.11ರ ತಡರಾತ್ರಿ ಸುರತ್ಕಲ್ ಲೈಟ್ ಹೌಸ್‌ನಿಂದ ಸುಮಾರು 42 ನಾಟಿಕಲ್ ಮೈಲ್ ದೂರದಲ್ಲಿ ಢಿಕ್ಕಿ ಹೊಡೆದಿತ್ತು. ಈ ಬೋಟ್‌ನಲ್ಲಿದ್ದ 14 ಮಂದಿಯ ಪೈಕಿ ಇಬ್ಬರನ್ನು ರಕ್ಷಿಸಲಾಗಿದ್ದರೆ, 6 ಮಂದಿಯ ಮೃತದೇಹ ಪತ್ತೆಯಾಗಿತ್ತು. ಕಾಣೆಯಾದ ಉಳಿದ 6 ಮಂದಿಗಾಗಿ ಕಳೆದೊಂದು ವಾರದಿಂದ ಶೋಧ ಕಾರ್ಯ ಮುಂದುವರಿಯುತ್ತಲೇ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News