​ಶೀರೂರು ಮಠಕ್ಕೆ ಬುಧವಾರ ಉತ್ತರಾಧಿಕಾರಿ ಘೋಷಣೆ

Update: 2021-04-20 15:27 GMT

ಉಡುಪಿ, ಎ.20: ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರ ನಿಧನದ ಬಳಿಕ ಖಾಲಿ ಉಳಿದಿರುವ ಉಡುಪಿ ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ಉತ್ತರಾಧಿಕಾರಿಯನ್ನು ದ್ವಂದ್ವ ಮಠವಾದ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಬುಧವಾರ ಅಪರಾಹ್ನ 2:30ಕ್ಕೆ ಹಿರಿಯಡಕ ಸಮೀಪದ ಶೀರೂು ಮೂಲಮಠದಲ್ಲಿ ಘೋಷಿಸಲಿದ್ದಾರೆ.

ಶೀರೂರು ಮಠದ 30ನೇ ಯತಿಗಳಾಗಿದ್ದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು 2018ರ ಜು.31ರಂದು ಅನಾರೋಗ್ಯದ ಕಾರಣ ನಿಧನರಾಗಿದ್ದರು. ಅವರು ತನ್ನ ಉತ್ತರಾಧಿಕಾರಿಯನ್ನು ನೇಮಿಸದೇ ಇದ್ದ ಕಾರಣ, ಅದರ ಜವಾಬ್ದಾರಿ ದ್ವಂದ್ವ ಮಠವಾದ ಸೋದೆ ವಾದಿರಾಜ ಮಠಕ್ಕೆ ಬಂದಿದ್ದು, ಎರಡು ವರ್ಷ ಒಂಭತ್ತು ತಿಂಗಳ ಬಳಿಕ ಸೋದೆ ಶ್ರೀಗಳು ಇದೀಗ ಶೀರೂರು ಮಠದ 31ನೇ ಯತಿಗಳ ಹೆಸರನ್ನು ನಾಳೆ ಘೋಷಿಸಲಿದ್ದಾರೆ.

ಬುಧವಾರ ಶೀರೂರು ಮೂಲ ಮಠದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ರಾಮನವಮಿ ಉತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಅವರು ಮಠದ ಉತ್ತರಾಧಿಕಾರಿ ಹಾಗೂ ಅವರ ಪಟ್ಟಾಭಿಷೇಕದ ಮಾಹಿತಿಯನ್ನು ಬಹಿರಂಗ ಪಡಿಸಲಿದ್ದಾರೆ.
ಅಲ್ಲದೇ ಮೂಲ ಮಠದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಭಾಂಗಣದ ಉದ್ಘಾಟನೆಯೂ ನಾಳೆ ನಡೆಯಲಿದೆ ಎಂದು ಶೀರೂರು ಮಠದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News