​ಉಡುಪಿ: ಜಿ.ವೆಂಕಟಸುಬ್ಬಯ್ಯ, ಪ್ರೊ.ಎಂ.ಎ.ಹೆಗಡೆಗೆ ಶೃದ್ಧಾಂಜಲಿ

Update: 2021-04-20 15:30 GMT

ಉಡುಪಿ, ಎ.20: ಶತಾಯುಷಿ, ಖ್ಯಾತ ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ ಹೆಗಡೆಯವರ ನಿಧನಕ್ಕೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಾಹೆ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ ಹಾಗೂ ಯಕ್ಷಗಾನ ಕೇಂದ್ರದ ವತಿಯಿಂದ ಶೃದ್ಧಾಂಜಲಿಯನ್ನು ಸಲ್ಲಿಸಲಾಯಿತು.

ಹಿರಿಯ ಸಾಹಿತಿ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಲಹಾ ಸಮಿತಿ ಸದಸ್ಯ ಡಾ. ಪಾದೇಕಲ್ಲು ವಿಷ್ಣು ಭಟ್ ಅವರು, ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಸಾಹಿತ್ಯ ಸಾಧನೆಗಳನ್ನು, ನಿಘಂಟು ಕ್ಷೇತ್ರದಲ್ಲಿ ಅವರ ಕೊಡುಗೆಗಳ ಕುರಿತು ವಿವರಿಸಿದರು. ಸಂಶೋಧನ ಕೇಂದ್ರಕ್ಕೂ ಅವರಿಗೂ ಇದ್ದ ಸಂಪರ್ಕವನ್ನು ಸ್ಮರಿಸಿದರು.

ಪ್ರೊ.ಎಂ.ಎ ಹೆಗಡೆ ಅವರು ಸಂಸ್ಕೃತ ಪ್ರಾಧ್ಯಾಪಕರಾಗಿ, ಯಕ್ಷಗಾನ ಕಲಾವಿದರಾಗಿ ಮಾಡಿದ ಸಾಧನೆಗಳನ್ನು ನೆನಪಿಸಿ ಸಾಹಿತ್ಯ, ಸಂಶೋಧನೆ, ಪ್ರಸಂಗ ರಚನೆಯ ಕ್ಷೇತ್ರವನ್ನು ಹೆಗಡೆ ಶ್ರೀಮಂತಗೊಳಿಸಿದವರು. ಅಕಾಡೆಮಿ ಮೂಲಕ ಅವರು ಹಮ್ಮಿಕೊಂಡ ಹಲವು ಯೋಜನೆಗಳು ಯಕ್ಷಗಾನ ಕ್ಷೇತ್ರದಲ್ಲಿ ಪ್ರಯೋಜನಕಾರಿಗಳಾಗಿದ್ದುವೆಂದು ತಿಳಿಸಿದರು.

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅಗಲಿದ ಗಣ್ಯರಿಬ್ಬರ ಜೀವನ ಯಶೋಗಾಥೆಯನ್ನು ತಿಳಿಸುತ್ತಾ, ಇವರಿಬ್ಬರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ನಷ್ಟ ಎಂದರು. ಮೃತರ ಗೌರವಾರ್ಥ ಒಂದು ನಿಮಿಷದ ವೌನ ಪ್ರಾರ್ಥನೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News