ಭಾರತವನ್ನು ಭಾರತ ಎಂದೇ ಕರೆಯಬೇಕು: ದಯಾನಂದ ಕತ್ತಲಸಾರ್

Update: 2021-04-20 15:33 GMT

ಉಡುಪಿ, ಎ.20: ಭಾರತವನ್ನು ವಿದೇಶಿ ಸಂಸ್ಕೃತಿ ಪ್ರಿಯರು ಇಂಡಿಯಾ ಎಂದು ಕರೆಯುತಿದ್ದಾರೆ. ಅದರೆ ಭಾರತವನ್ನು ಭಾರತ ಎಂದೇ ಕರೆಯಬೇಕು. ಅಮೆರಿಕ, ಇಂಗ್ಲೆಂಡ್, ಜಪಾನ್, ಚೀನಾ, ಪಾಕಿಸ್ತಾನಗಳನ್ನು ಆಯಾ ಹೆಸರಿನಿಂದಲೇ ಕರೆಯುವಾಗ ಭಾರತವನ್ನು ಇಂಡಿಯಾ ಎಂದು ಏಕೆ ಕರೆಯಬೇಕು. ವಿದೇಶಿಯರೂ ಇನ್ನು ಮುಂದೆ ಭಾರತವನ್ನು ಅದೇ ಹೆಸರಿನಿಂದ ಕರೆಯುವಂತಾಗಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲಸಾರ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಆತ್ರಾಡಿ ಸಮೀಪದ ಹಿರೇಬೆಟ್ಟಿನ ವಿಶ್ವೇಶ್ವರನಗರದಲ್ಲಿ ಕಲಾಭಿಮಾನಿ ಬಳಗದ ವತಿಯಿಂದ ನಡೆದ 20ನೇ ವರ್ಷದ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ವಿದೇಶಿ ಸಂಸ್ಕೃತಿಯ ಅತಿಕ್ರಮಣದ ಮೂಲಕ ನಮ್ಮ ಶಿಕ್ಷಣವನ್ನೇ ದಾರಿ ತಪ್ಪಿಸಲಾಗಿದೆ. ಮಕ್ಕಳು ಮಿಥ್ಯಾಕರ್ಷಣೆಗೆ ಬಲಿಯಾಗುತ್ತಿದ್ದಾರೆ. ಜೊತೆಗೆ ನಾವು ಅವರಿಗೆ ಹಬ್ಬದ ಮಹತ್ವ ಹೇಳುತ್ತಿಲ್ಲ. ಹಿರಿಯರನ್ನು ಗೌರವಿಸುವುದನ್ನು ಹೇಳಿಕೊಡುತ್ತಿಲ್ಲ. ಆದ್ದರಿಂದಲೇ ಇಂದು ಕೂಡು ಕುಟುಂಬಗಳಿಲ್ಲ. ಎಲ್ಲರೂ ಸೇರಿ ಹಬ್ಬದ ಆಚರಣೆಯನ್ನೂ ಮಾಡುತಿಲ್ಲ. ಹಿರಿಯರು ಅನಾಥಾಶ್ರಮ ಸೇರುತಿದ್ದಾರೆ ಎಂದವರು ಕಳವಳ ವ್ಯಕ್ತಪಡಿಸಿದರು.

ಕಾಪು ಶಾಸಕ ಲಾಲಾಜಿ ಮೆಂಡನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಆತ್ರಾಡಿ ಬೀಡಿನ ಉದಯರಾಜ್ ಹೆಗ್ಡೆ, ಉದ್ಯಮಿ ಪ್ರವೀಣ್ ಪೂಜಾರಿ, ಯವ ಬಿಜೆಪಿ ವಕ್ತಾರ ಶ್ರೀನಿಧಿ ಹೆಗ್ಡೆ, ಆತ್ರಾಡಿ ಗ್ರಾಪಂ ಅಧ್ಯಕ್ಷೆ ರೂಪ ಶೆಟ್ಟಿ, ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಆಗಮಿಸಿದ್ದರು.

ಕಲಾಭಿಮಾನಿ ಬಳಗದ ಗೌರವ ಸಲಹೆಗಾರ ಸೀತಾರಾಮ ಭಟ್ ಸ್ವಾಗತಿಸಿದರು. ಗೌರವಾಧ್ಯಕ್ಷ ಸಚ್ಚಿದಾನಂದ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿನೇಶ್ ಪ್ರಭು ಕಾರ್ಯಕ್ರಮ ನಿರೂಪಿಸಿ, ಅಧ್ಯಕ್ಷ ಪ್ರಕಾಶ್ ವಿ.ನಾಯಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News