ಉಡುಪಿ: ಗುಡುಗು ಸಹಿತ ಮಳೆ, ಅಂಗಡಿ ಮೇಲೆ ಬಿದ್ದ ಮರ

Update: 2021-04-20 17:01 GMT

ಉಡುಪಿ, ಎ.20: ಜಿಲ್ಲೆಯ ನಾನಾ ಭಾಗಗಳಲ್ಲಿ ಇಂದು ಸಂಜೆಯ ವೇಳೆ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದ್ದು, ಬ್ರಹ್ಮಾವರ ತಾಲೂಕು 38 ಕಳತ್ತೂರು ಸಂತೆಕಟ್ಟೆಯಲ್ಲಿ ಅಂಗಡಿಯೊಂದರ ಮೇಲೆ ಭಾರೀ ಗಾತ್ರದ ಮರ ಬಿದ್ದು ಭಾರೀ ನಷ್ಟ ಉಂಟಾಗಿದೆ.

ಇಂದು ಸಂಜೆ 4:15ರ ಸುಮಾರಿಗೆ ಗುಡುಗು-ಸಿಡಿಲು ಸಹಿತ ಗಾಳಿ ಬೀಸಿದ್ದು, ಇದಕ್ಕೆ ಹಳೆಯ ಭಾರೀ ಗಾತ್ರದ ಮರವೊಂದು ಗೋಪಾಲ್ ಸೇರಿಗಾರ್ ಎಂಬವರ ಅಂಗಡಿ ಕೋಣೆಯ ಮೇಲೆ ಬಿದ್ದಿದ್ದು, ಅಂಗಡಿ ಸಂಪೂರ್ಣ ಹಾನಿಗೊಳಗಾಗಿದೆ. 60ರಿಂದ 70ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.

ಇಂದು ಬೆಳಗಿನಿಂದಲೇ ಜೋರಾದ ಬಿಸಿಲಿದ್ದು, ಉಷ್ಣತೆ ವಿಶೇಷವಾಗಿತ್ತು. ಆದರೆ ಸಂಜೆಯ ವೇಳೆ ಮೋಡ ಕವಿದು ಗುಡುಗು ಸಹಿತ ಮಳೆ ಸುರಿಯತೊಡಗಿತು. ಇದರಿಂದ ವಾತಾವರಣ ಒಮ್ಮೆಗೆ ತಂಪಾಯಿತು. ಸುಮಾರು ಅರ್ಧಗಂಟೆಯ ಕಾಲ ಮಳೆ ಸುರಿಯಿತು.

ಉಡುಪಿಯಲ್ಲೂ ಇಂದು ಸಂಜೆ ಗುಡುಗು ಸಹಿತ ಮಳೆ ಸುರಿಯಿತು. ಇದರಿಂದ ಬೇರೆ ಬೇರೆ ಉದ್ದೇಶಗಳಿಗೆ ಪೇಟೆಗೆ ಬಂದವರು ಮಳೆಗೆ ಸಿಕ್ಕಿಹಾಕಿಕೊಳ್ಳುವಂತಾಯಿತು. ಕುಂದಾಪುರ, ಬೈಂದೂರು, ಕಾರ್ಕಳ ತಾಲೂಕಿನಿಂದಲೂ ಅಲ್ಲಲ್ಲಿ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಆದರೆ ಹೆಚ್ಚಿನ ಹಾನಿಯ ಮಾಹಿತಿ ಸದ್ಯಕ್ಕೆ ದೊರಕಿಲ್ಲ.

ಕಾಪು, ಕಟಪಾಡಿ, ಪಡುಬಿದ್ರಿ, ಕುಂದಾಪುರದ ಗ್ರಾಮೀಣ ಪ್ರದೇಶಗಳಲ್ಲೂ ಉತ್ತಮ ಮಳೆ ಸುರಿದ ಬಗ್ಗೆ ಮಾಹಿತಿಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News