ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣ: ಪೊಲೀಸ್ ಅಧಿಕಾರಿಯ ಅಪರಾಧ ಸಾಬೀತು

Update: 2021-04-21 03:52 GMT
File Photo

ಮಿನಪೊಲಿಸ್(ಅಮೆರಿಕ): ವಿಶ್ವಾದ್ಯಂತ ಸುದ್ದಿಯಾಗಿದ್ದ ಆಫ್ರಿಕನ್ ಮೂಲದ ಅಮೆರಿಕ ಪ್ರಜೆ ಜಾರ್ಜ್ ಫ್ಲಾಯ್ಡ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಮಿನಪೊಲಿಸ್ ಬಿಳಿಯ ಪೊಲೀಸ್ ಅಧಿಕಾರಿ ಡೆರಿಕ್ ಚೌವಿನ್ ವಿರುದ್ಧದ ಆರೋಪ ಸಾಬೀತಾಗಿದೆ.

ಕರಿಯ ಪ್ರಜೆಯನ್ನು ಚಿತ್ರಹಿಂಸೆ ನೀಡಿ ಚೌವಿನ್ ಸಾಯಿಸಿರುವುದು ಜನಾಂಗೀಯ ದ್ವೇಷದ ಪ್ರಕರಣವಾಗಿದ್ದು, ಇದರ ವಿಚಾರಣೆ ಅಮೆರಿಕದ ಪೊಲೀಸ್ ಇಲಾಖೆಯ ಉತ್ತರದಾಯಿತ್ವದ ಪರೀಕ್ಷೆ ಎಂದೇ ಬಿಂಬಿಸಲಾಗಿತ್ತು. 11 ಗಂಟೆಗಳ ವಿಚಾರಣೆಯಲ್ಲಿ ನ್ಯಾಯಾಧೀಶರು, 45 ವರ್ಷದ ಚೌವಿನ್ ಅಪರಾಧಿ ಎಂದು ಘೋಷಿಸಿದರು. ಚೌವಿನ್ ವಿರುದ್ಧ ಸೆಕೆಂಡ್ ಡಿಗ್ರಿ ಮರ್ಡರ್, ಥರ್ಡ್ ಡಿಗ್ರಿ ಮರ್ಡರ್ ಮತ್ತು ಮನುಷ್ಯವಧೆ ಆರೋಪ ಸಾಬೀತಾಗಿದೆ.

ಮಿನಪೊಲಿಸ್ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆಯ ನಡುವೆಯೂ ಭಾರಿ ಸಂಖ್ಯೆಯ ಜನ ಸೇರಿದ್ದರು. ಇಡೀ ದೇಶ ಕುತೂಹಲದಿಂದ ಕಾಯುತ್ತಿದ್ದ ತೀರ್ಪನ್ನು ನ್ಯಾಯಾಧೀಶರು ಪ್ರಕಟಿಸುತ್ತಿದ್ದಂತೆ ಹರ್ಷೋದ್ಗಾರ ಮುಗಿಲುಮುಟ್ಟಿತು. ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ ಆರೋಪಿಗೆ, ಹೆನ್ನೆಪಿನ್ ಕೌಂಟಿ ಜಡ್ಜ್ ಪೀಟರ್ ಕಹಿಲ್ ಅವರು ಅವಿರೋಧ ತೀರ್ಪು ಪ್ರಕಟಿಸುತ್ತಿದ್ದಂತೆಯೇ ಕೈ ಬೇಡಿ ತೊಡಿಸಲಾಯಿತು. ವಿವಿಧ ಜನಾಂಗಗಳಿಗೆ ಸೇರಿದ ಏಳು ಮಹಿಳಾ ಮತ್ತು ಐವರು ಪುರುಷ ನ್ಯಾಯಾಧೀಶರ ತಂಡ ಈ ಐತಿಹಾಸಿಕ ತೀರ್ಪು ನಿಡಿತು.

ಮುಖಕ್ಕೆ ಮಾಸ್ಕ್ ಧರಿಸಿದ್ದ ಆರೋಪಿಯ ಮುಖದಲ್ಲಿ ಯಾವುದೇ ಭಾವನೆಗಳ ಅಭಿವ್ಯಕ್ತಿ ಕಂಡುಬರಲಿಲ್ಲ. ಆರೋಪಿಯನ್ನು ಸುರಕ್ಷಿತವಾಗಿ ನ್ಯಾಯಾಲಯ ಆವರಣದಿಂದ ಹೊರಕ್ಕೆ ಕರೆದೊಯ್ಯುತ್ತಿದ್ದಾಗ ಜಾರ್ಜ್ ಫ್ಲಾಯ್ಡ್ ಅವರ ಸಹೋದರ ಫಿಲೋನೈಸ್ ಫ್ಲಾಯ್ಡ್ ಅಭಿಯೋಜಕರನ್ನು ತಬ್ಬಿಕೊಂಡು ಸಂತಸ ವ್ಯಕ್ತಪಡಿಸಿದರು.

ಶಿಕ್ಷೆಯ ಪ್ರಮಾಣವನ್ನು ಮುಂದೆ ಪ್ರಕಟಿಸಲಾಗುವುದು. ಆದರೆ ದ್ವಿತೀಯ ದರ್ಜೆಯ ಹತ್ಯೆ ಆರೋಪ ಎದುರಿಸುತ್ತಿರುವ ಚೌವಿನ್ 40 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News