ಟೊಳ್ಳು ಮಾತು, ಜವಾಬ್ದಾರಿ ಕೈಬಿಟ್ಟ ಪ್ರಧಾನಿ: ಮೋದಿ ಭಾಷಣಕ್ಕೆ ವಿಪಕ್ಷಗಳ ಕಿಡಿ

Update: 2021-04-21 07:08 GMT

ಹೊಸದಿಲ್ಲಿ: ದೇಶದಲ್ಲಿ ಏರುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾಡಿರುವ ಭಾಷಣ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಪ್ರಧಾನಿಯ ಭಾಷಣವನ್ನು ಕಾಂಗ್ರೆಸ್ ಪಕ್ಷ "ಟೊಳ್ಳು ಮಾತು'' ಎಂದು ಹೀಗಳೆದರೆ ಸಿಪಿಎಂ ತನ್ನ  ಪ್ರತಿಕ್ರಿಯೆಯಲ್ಲಿ ಮೋದಿ ತಮ್ಮ ಭಾಷಣದಲ್ಲಿ "ತಮ್ಮ ಜವಾಬ್ದಾರಿಯನ್ನು ಕೈಬಿಟ್ಟಿರುವುದನ್ನು,'' ಘೋಷಿಸಿದ್ದಾರೆ ಎಂದು ಟೀಕಿಸಿದೆ.

"ದೇಶದಲ್ಲಿನ ಈ ಗಂಭೀರ ಆರೋಗ್ಯ ತುರ್ತುಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಸರಕಾರ ಏನು ಮಾಡುತ್ತಿದೆ ಎಂಬುದರ ಕುರಿತು ಪ್ರಧಾನಿಯಿಂದ ಒಂದೇ ಒಂದು ಮಾತು ಬಂದಿಲ್ಲ,'' ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದರು.

"ಭಾರತಕ್ಕೆ ಆಕ್ಸಿಜನ್ ಅಗತ್ಯವಿದೆ. ಕೊರತೆಯನ್ನು ಹೇಗೆ ನೀಗಿಸಿ ದೊಡ್ಡ ಸಂಖ್ಯೆಯ ಜೀವಗಳನ್ನು ಹೇಗೆ ಉಳಿಸುವುದೆಂಬುದರ ಕುರಿತು ಒಂದೇ ಒಂದು ಮಾತಿಲ್ಲ. ಲಸಿಕೆಗಳ ಪೂರೈಕೆ ಹೆಚ್ಚಿಸುವ ಕುರಿತೂ ಒಂದೇ ಒಂದು ಮಾತಿಲ್ಲ.'' ಎಂದು ಯೆಚೂರಿ ಸರಣಿ ಟ್ವೀಟ್‍ಗಳ ಮೂಲಕ ಸರಕಾರವನ್ನು ಟೀಕಿಸಿದ್ದಾರೆ.

"ಪ್ರಧಾನಿ ತಮ್ಮ ಹೊರೆಯನ್ನು ಜನರು ಹಾಗೂ ರಾಜ್ಯ ಸರಕಾರಗಳಿಗೆ ಹಸ್ತಾಂತರಿಸಿ ಬಿಟ್ಟಿದ್ದಾರೆ.  ವಲಸಿಗ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆಯಿಲ್ಲ, ಕಷ್ಟದಲ್ಲಿರುವ ಜನರಿಗೆ ಉಚಿತ ಆಹಾರ ಅಥವಾ ಆರ್ಥಿಕ ಸಹಾಯವೂ ಇಲ್ಲ,'' ಎಂದು ಯೆಚೂರಿ ಹೇಳಿದರು.

ಲಾಕ್ ಡೌನ್ ಅನ್ನು ಕೊನೆಯ ಅಸ್ತ್ರವಾಗಿ ಬಳಸುವಂತೆ ಮೋದಿ ರಾಜ್ಯಗಳಿಗೆ ಹೇಳಿರುವುದು ಕಳೆದ ವರ್ಷದ ಲಾಕ್ ಡೌನ್‍ನಿಂದುಂಟಾದ ಅನಾಹುತಗಳನ್ನು ಒಪ್ಪಿಕೊಂಡಂತೆ ಎಂದು ಯೆಚೂರಿ ಹೇಳಿದರು.

"ಇಂತಹ ಒಂದು ಬಿಕ್ಕಟ್ಟಿನ ಸಂದರ್ಭ ಮೋದಿ ತಮ್ಮ ಜವಾಬ್ದಾರಿಯನ್ನು ಕೈಬಿಟ್ಟಿದ್ದಾರಲ್ಲದೆ ಎಲ್ಲವನ್ನೂ ರಾಜ್ಯ ಸರಕಾರಗಳಿಗೆ ಬಿಟ್ಟು ಬಿಟ್ಟಿದ್ದಾರೆ ಹಾಗೂ ಲಾಕ್ ಡೌನ್ ಹೇರದಂತೆ ಸಲಹೆ ಕೂಡ ನೀಡಿದ್ದಾರೆ,'' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ಹೇಳಿದರು.

ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರಯೆನ್ ಪ್ರತಿಕ್ರಿಯಿಸಿ "ಮಾತುಗಳು ಮಾತುಗಳು ಹಾಗೂ ಮಾತುಗಳು.  ನಿಮಗೆ ಅಧಿಕಾರದ ಲಾಲಸೆ ಹಾಗೂ  ನಂತರ ಕೇವಲ ಮಾತುಗಳಿಂದ ಜನರನ್ನು ಮೂರ್ಖರಾಗಿಸುತ್ತೀರಿ. ಎಲ್ಲಿದೆ ಲಸಿಕೆ,'' ಎಂದು ಕೇಳಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಕೂಡ ಪ್ರತಿಕ್ರಿಯಿಸಿ "ಕೋವಿಡ್ ಸಮಸ್ಯೆಗೆ ಕೇಂದ್ರೀಕೃತ ನಿರ್ವಹಣೆ ಯಶಸ್ವಿಯಾಗಿಲ್ಲ ಎಂದು ಮೋದಿ ಒಪ್ಪಿಕೊಂಡಂತಿದೆ. ಈಗ ಎರಡನೇ ಅಲೆ ನಿಭಾಯಿಸುವುದು ರಾಜ್ಯ ಸರಕಾರಗಳ ಜವಾಬ್ದಾರಿ. ಅಷ್ಟೇ ಅಲ್ಲದೆ ಮೊಹಲ್ಲಾ ಸಮಿತಿಗಳಿಗೆ ಇನ್ನಷ್ಟು ವಿಕೇಂದ್ರೀಕರಣಗೊಂಡಿದೆ. ಒಂದು ವರ್ಷ ಎಷ್ಟೊಂದು ಬದಲಾವಣೆ ತಂದಿದೆ,'' ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News