ಶಿರೂರು ಮಠಕ್ಕೆ ಅನಿರುದ್ಧ ಸರಳತ್ತಾಯ ಉತ್ತರಾಧಿಕಾರಿ

Update: 2021-04-21 11:32 GMT
ಅನಿರುದ್ಧ ಸರಳತ್ತಾಯ

ಉಡುಪಿ, ಎ.21: ಉಡುಪಿಯ 16ರ ಹರೆಯದ ಬಾಲಕ ಅನಿರುದ್ಧ ಸರಳತ್ತಾಯ, ಶ್ರೀಲಕ್ಷ್ಮೀವರತೀರ್ಥರ ನಿಧನದಿಂದ ತೆರವಾಗಿರುವ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಉತ್ತರಾಧಿಕಾರಿಯಾಗಿ ಘೋಷಿಸಲಾಗಿದೆ.

ಹಿರಿಯಡ್ಕ ಸಮೀಪದಲ್ಲಿರುವ ಶಿರೂರು ಮೂಲಮಠದಲ್ಲಿ ಶ್ರೀರಾಮ ನವಮಿ ಸಂಬಂಧ ಬುಧವಾರ ನಡೆದ ಕಾರ್ಯಕ್ರಮದ ಕೊನೆಗೆ ಶಿರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥರು ಈ ಘೋಷಣೆ ಮಾಡಿದರು.

ಶ್ರೀಮಧ್ವಾಚಾರ್ಯರು 800 ವರ್ಷಗಳ ಹಿಂದೆ ಸ್ಥಾಪಿಸಿದ ಉಡುಪಿ ಶ್ರೀಕೃಷ್ಣ ಮಠದ ಅಷ್ಟಮಠಗಳ ಪೈಕಿ ಒಂದಾದ ಶಿರೂರು ಮಠದ 30ನೇ ಯತಿಗಳಾದ ಶ್ರೀಲಕ್ಷ್ಮೀವರ ತೀರ್ಥರು 2018ರ ಜು.31ರಂದು ಅಸೌಖ್ಯದಿಂದ ನಿಧನರಾಗಿದ್ದರು. ಆ ಬಳಿಕ ಈ ಪೀಠ ಖಾಲಿಯಾಗಿತ್ತು. ದ್ವಂದ್ವ ಮಠದ ಸೋದೆ ಮಠದ ಶ್ರೀಗಳು ಇದರ ಉಸ್ತುವಾರಿ ನೋಡಿಕೊಂಡಿದ್ದು, ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವ ಜವಾಬ್ದಾರಿಯೂ ಅವರ ಮೇಲಿತ್ತು.

ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್‌ನಲ್ಲಿ ಈ ಬಾರಿ ಎಸೆಸೆಲ್ಸಿ ಮುಗಿಸಲಿರುವ 16 ವರ್ಷ ಪ್ರಾಯದ ಅನಿರುದ್ಧ ಸರಳತ್ತಾಯ ಅವರನ್ನು ಈ ಪೀಠಕ್ಕೆ ಆಯ್ಕೆ ಮಾಡಿದ್ದಾರೆ. ಮೂಲತ: ಧರ್ಮಸ್ಥಳ ಸಮೀಪದ ನಿಡ್ಲೆ ಗ್ರಾಮದವರಾಗಿದ್ದು, ಈಗ ಉಡುಪಿಯ ನಿವಾಸಿಯಾಗಿರುವ ಡಾ.ಎಂ.ಉದಯಕುಮಾರ್ ಸರಳತ್ತಾಯ ದಂಪತಿಗಳ ಏಕೈಕ ಪುತ್ರ ಅನಿರುದ್ಧ ಮೊದಲು ಸನ್ಯಾಸಶ್ರಮ ಸ್ವೀಕರಿಸಲಿದ್ದು, ಬಳಿಕ ಶಿರೂರು ಮಠದ 31ನೇ ಯತಿಯಾಗಿ ಪಟ್ಟಾಭಿಷೇಕ ನಡೆಯಲಿದೆ.

ಅನಿರುದ್ಧ ಸರಳತ್ತಾಯ ಲೌಕಿಕ ಶಿಕ್ಷಣ ಪಡೆಯುತಿದ್ದು, ತಂದೆಯಿಂದ ಮನೆಯಲ್ಲೇ ವೇದಾಧ್ಯಯನ, ವೇದಪಾಟ, ತಾತ್ಪರ್ಯ ನಿರ್ಣಯ, ಯುಕ್ತಮಲ್ಲಿಕಾದಿ ವೇದಾಂತ ಅಧ್ಯಯನ ನಡೆಯುತಿದ್ದು, ಸನ್ಯಾಶ್ರಮ ಸ್ವೀಕರಿಸಿದ ಬಳಿಕ 4ರಿಂದ 5 ವರ್ಷಗಳ ಕಾಲ ವೇದಾಂತ ಅದ್ಯಯನ ನಡೆಯಲಿದೆ ಎಂದು ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುಂದಿನ ಮೇ 11ರಿಂದ 14ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಅನಿರುದ್ಧರ ಸನ್ಯಾಸ ಸ್ವೀಕಾರ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ. ಮೇ 13ರಂದು ಬೆಳಗ್ಗೆ 7:30ರಿಂದ 8 ಗಂಟೆಯ ಶುಭ ಮುಹೂರ್ತದಲ್ಲಿ ಸನ್ಯಾಸ ಸ್ವೀಕಾರ ಕಾರ್ಯಕ್ರಮ ನಡೆದರೆ, ಮೇ 14ರ ಅಪರಾಹ್ನ 12:35ರಿಂದ 12:50ರ ನಡುವೆ ಶಿರೂರು ಪೀಠದ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ ಎಂದು ಸೋದೆ ಶ್ರೀ ತಿಳಿಸಿದರು.

ಶಿರೂರು ಮಠಕ್ಕೆ ಉತ್ತರಾಧಿಕಾರಿಯ ಆಯ್ಕೆ ಪ್ರಕ್ರಿಯೆ ಕುರಿತು ಪ್ರಶ್ನಿಸಿದಾಗ, ಅವರ ಜಾತಕದ ಆಧಾರದಲ್ಲಿ ಈ ಆಯ್ಕೆ ನಡೆಸಲಾಗಿದೆ. ಬಹಳಷ್ಟು ಮಂದಿ ತಜ್ಞರು ಅವರ ಜಾತಕವನ್ನು ಪರಿಶೀಲಿಸಿದ್ದು, ಇದರಲ್ಲಿ ಸನ್ಯಾಸ ಯೋಗ ಹಾಗೂ ಪೀಠಾಧಿಪತ್ಯ ಯೋಗ ಇರುವುದನ್ನು ಖಚಿತಪಡಿಸಿಕೊಂಡು ಈ ಆಯ್ಕೆ ನಡೆಯಿತು. ಇದಕ್ಕೆ ಮೊದಲು ಸ್ವತಹ ವಟುವೇ ತನಗೆ ಕೃಷ್ಣನನ್ನು ಮುಟ್ಟಿ ಪೂಜಿಸಲು ಆಸಕ್ತಿ ಇದ್ದು, ತಾನು ಸನ್ಯಾಸಿಯಾಗಲು ಸಿದ್ಧ ಎಂದು ತಿಳಿಸಿದ್ದು, ಇದೇ ಮಾತನ್ನು ಆತ ಹೆತ್ತವರ ಬಳಿಯೂ ಹೇಳಿದ್ದ. ಹೆತ್ತವರು ಸಂತೋಷದಿಂದ ಒಪ್ಪಿಕೊಂಡ ಬಳಿಕವೇ ನಾವು ಆತನ ಆಯ್ಕೆಯನ್ನು ಒಪ್ಪಿಕೊಂಡಿದ್ದಾಗಿ ಸೋದೆ ಶ್ರೀ ತಿಳಿಸಿದರು.

ಎರಡು ವರ್ಷಗಳ ಹಿಂದೆಯೇ ನಾವೀ ಆಯ್ಕೆ ಮಾಡಿದ್ದೆವು. ಎರಡು ವರ್ಷಗಳಿಂದ ಆತನ ಮೇಲೆ ಸತತ ನಿಗಾ ಇರಿಸಿ, ಪರೀಕ್ಷಿಸಿ ಆತನ ಒಳ್ಳೆಯ ಮನೋಧರ್ಮ, ವೇದಾಂತ ಅದ್ಯಯನದಲ್ಲಿರುವ ಆಸಕ್ತಿಯನ್ನು ಗಮನಿಸಿ ಅಂತಿಮ ಆಯ್ಕೆ ನಡೆಸಿದ್ದೇವೆ. 16 ವರ್ಷ ವಯಸ್ಸಿನ ಆತ ಇನ್ನು 4-5ವರ್ಷ ಶಿರಸಿ ಸಮೀಪದ ಸೋಂದಾದಲ್ಲಿರುವ ಸೋದೆ ಮೂಲ ಮಠದಲ್ಲಿ ಶಾಸ್ತ್ರಾಧ್ಯಯನ, ವೇದಾಂತ ಅಧ್ಯಯನ ನಡೆಸಲಿದ್ದಾರೆ. ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಿದ್ದೇವೆ ಎಂದರು.

ಬಾಲಸನ್ಯಾಸ ಪರಂಪರೆ: 16ವರ್ಷ ಪ್ರಾಯದ ಬಾಲಕನಿಗೆ ಸನ್ಯಾಸದೀಕ್ಷೆ ನೀಡುವುದು ಸರಿಯೇ ಎಂದು ಪ್ರಶ್ನಿಸಿದಾಗ, ಮಧ್ವಾಚಾರ್ಯರು ಸ್ಥಾಪಿಸಿದ ಅಷ್ಟಮಠಗಳಲ್ಲಿ ಬಾಲಸನ್ಯಾಸದ ಪರಂಪರೆಯೇ ಇದೆ. ಬಾಲಸನ್ಯಾಸವೇ ಇಲ್ಲಿನ ಸಂಪ್ರದಾಯ. ನಾನು ಸಹ ನನ್ನ 15ನೇ ವಯಸ್ಸಿನಲ್ಲಿಯೇ ಸನ್ಯಾಸಾಶ್ರಮ ಸ್ವೀಕರಿಸಿದ್ದೆ ಎಂದು ಸಮರ್ಥಿಸಿಕೊಂಡರು.

ಕೆಲ ವರ್ಷಗಳ ಹಿಂದೆ ಪೇಜಾವರ ಮಠದ ಹಿರಿಯ ಯತಿಗಳಾದ ಶ್ರೀವಿಶ್ವೇಶತೀರ್ಥರು ಶ್ರೀಕೃಷ್ಣ ಮಠದಲ್ಲಿ ಇನ್ನು ಮುಂದೆ ಸನ್ಯಾಸ ಸ್ವೀಕರಿಸುವವರು ಕನಿಷ್ಠ 10 ವರ್ಷ ವೇದಾದ್ಯಯನ ನಡೆಸಿರಬೇಕು ಹಾಗೂ ಅವರಿಗೆ ಕನಿಷ್ಠ 21 ವರ್ಷ ಪ್ರಾಯವಾಗಿರಬೇಕೆಂಬ ನಿರ್ಣಯವನ್ನು ಕೈಗೊಂಡಿದ್ದರೆಂಬ ಬಗ್ಗೆ ಸೋದೆಶ್ರೀಗಳನ್ನು ಪ್ರಶ್ನಿಸಿದಾಗ, ಅಂಥ ಒಂದು ನಿರ್ಣಯ ಅಷ್ಟಮಠಗಳ ಸ್ವಾಮೀಜಿಗಳ ನಡುವೆ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಇರುವಾಗ ಇಂಥ ಚರ್ಚೆ, ನಿರ್ಣಯ ಆಗಿಲ್ಲ. ಅದು ಪೇಜಾವರಶ್ರೀಗಳ ವೈಯಕ್ತಿಕ ಅಭಿಪ್ರಾಯವಾಗಿರಬಹುದು ಎಂದರು.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಎಲ್ಲಾ ಅಷ್ಟಮಠಗಳ ಸ್ವಾಮೀಜಿಗಳು ಸೇರಿ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಶಿರೂರು ಮಠಕ್ಕೆ ಅನಿರುದ್ಧರನ್ನು ಉತ್ತರಾಧಿಕಾರಿಯಾಗಿ ನೇಮಿಸುವ ಕುರಿತು ಎಲ್ಲಾ ಸ್ವಾಮೀಜಿ ಬಳಿ ಚರ್ಚಿಸಿದ್ದೆ. ಆಗ ಯಾರೊಬ್ಬರೂ ವಿರೋಧ, ಆಕ್ಷೇಪ ಸೂಚಿಸಿರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದರು. ಅವರೆಲ್ಲರೂ ಸಮ್ಮತಿ ಪಡೆದೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News