ಸಾಕಷ್ಟು ಹಾಸಿಗೆಗಳು ಲಭ್ಯವಿದ್ದರೆ ಕೋವಿಡ್-19 ರೋಗಿಗಳಿಗೇಕೆ ದೊರೆಯುತ್ತಿಲ್ಲ?:ಗುಜರಾತ್ ಹೈಕೋರ್ಟ್ ಪ್ರಶ್ನೆ

Update: 2021-04-21 14:48 GMT

ಅಹ್ಮದಾಬಾದ್,ಎ.21: ಸಾಕಷ್ಟು ಹಾಸಿಗೆಗಳು ಲಭ್ಯವಿದ್ದರೆ ಹಲವಾರು ಕೋವಿಡ್-19 ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಏಕೆ ಪ್ರವೇಶ ದೊರೆಯುತ್ತಿಲ್ಲ ಎಂದು ಗುಜರಾತ ಉಚ್ಚ ನ್ಯಾಯಾಲಯವು ವಿಜಯ ರೂಪಾನಿ ನೇತೃತ್ವದ ರಾಜ್ಯ ಸರಕಾರವನ್ನು ಪ್ರಶ್ನಿಸಿದೆ.

ಉಚ್ಚ ನ್ಯಾಯಾಲಯವು ರಾಜ್ಯದಲ್ಲಿಯ ಕೋವಿಡ್-19 ಸ್ಥಿತಿಯ ಕುರಿತು ಮಂಗಳವಾರ ಸ್ವಯಂಪ್ರೇರಿತವಾಗಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸಂದರ್ಭ,ಆಸ್ಪತ್ರೆಗಳಲ್ಲಿ ಲಭ್ಯವಿರುವ 79,944 ಹಾಸಿಗೆಗಳ ಪೈಕಿ ಕೇವಲ 55,783 ಹಾಸಿಗೆಗಳಲ್ಲಿ ರೋಗಿಗಳಿದ್ದಾರೆ ಎಂದು ಗುಜರಾತ್ ಸರಕಾರದ ಪರ ನ್ಯಾಯವಾದಿ ಮನೀಷಾ ಶಾ ಅವರು ತಿಳಿಸಿದರು.

ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗುತ್ತಿಲ್ಲ ಎಂಬ ದೂರುಗಳನ್ನು ಬೆಟ್ಟು ಮಾಡಿದ ಮುಖ್ಯ ನ್ಯಾಯಾಧೀಶ ವಿಕ್ರಮನಾಥ ಮತ್ತು ನ್ಯಾ.ಭಾರ್ಗವ ಕಾರಿಯಾ ಅವರ ಪೀಠವು,ನೀವು ಹಂಚಿಕೊಂಡಿರುವ ಅಂಕಿಅಂಶಗಳು ನಿಯೋಜಿತ ಆಸ್ಪತ್ರೆಗಳಲ್ಲಿಯೂ ಖಾಲಿ ಹಾಸಿಗೆಗಳಿವೆ ಎನ್ನುವುದನ್ನು ಸೂಚಿಸುತ್ತಿವೆ. ಅವು ನಿಜವಾಗಿದ್ದರೆ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಚಿಕಿತ್ಸೆಯನ್ನು ಪಡೆಯಲು ಜನರೇಕೆ ಪರದಾಡುತ್ತಿದ್ದಾರೆ ಎಂದು ಪ್ರಶ್ನಿಸಿತು.

ತುರ್ತು ಪ್ರತಿಕ್ರಿಯಾ ಸೇವೆಗಳ ಭಾಗವಾಗಿರುವ 108 ಆ್ಯಂಬುಲನ್ಸ್‌ಗಳು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ಗಣನೀಯ ಸಮಯವನ್ನು ತೆಗೆದುಕೊಳ್ಳುತ್ತಿವೆ ಎಂದು ರಾಜ್ಯದ ನಿವಾಸಿಗಳು ವ್ಯಕ್ತಪಡಿಸಿರುವ ಕಳವಳಗಳನ್ನು ಪ್ರಸ್ತಾಪಿಸಿದ ಪೀಠವು,ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು 108 ಆ್ಯಂಬುಲನ್ಸ್‌ಗಳ ಬದಲು ಖಾಸಗಿ ವಾಹನಗಳಲ್ಲಿ ಕರೆತಂದರೆ ಅವರನ್ನೇಕೆ ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳುತ್ತಿಲ್ಲ ಎಂದೂ ಪ್ರಶ್ನಿಸಿತು.

ರೋಗಿಗಳ ನಿವಾಸಗಳ ಸಮೀಪವೇ ಸಾಕಷ್ಟು ಹಾಸಿಗೆಗಳು ಲಭ್ಯವಿದ್ದರೂ,ಹೆಚ್ಚಿನವರು ನಿರ್ದಿಷ್ಟ ಆಸ್ಪತ್ರೆಗಳಲ್ಲಿಯೇ ದಾಖಲಾಗಲು ಬಯಸುತ್ತಿದ್ದಾರೆ. ಪರಿಣಾಮವಾಗಿ ಅಂತಹ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಪೂರ್ಣವಾಗಿ ಭರ್ತಿಯಾಗುತ್ತಿವೆ ಎಂದು ಶಾ ತಿಳಿಸಿದರು.

900 ಹಾಸಿಗೆಗಳು ಮತ್ತು ಆಮ್ಲಜನಕ ಸೌಲಭ್ಯಗಳೊಂದಿಗೆ ಅಹ್ಮದಾಬಾದ್‌ನಲ್ಲಿ ಕೋವಿಡ್-19 ಆಸ್ಪತ್ರೆಯೊಂದನ್ನು ತಾನು ಸ್ಥಾಪಿಸುತ್ತಿರುವುದಾಗಿ ರಾಜ್ಯ ಸರಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News