​ದ.ಕ. ಜಿಲ್ಲೆಯಲ್ಲಿ 401 ಕೊರೋನ ಪಾಸಿಟಿವ್: ಒಬ್ಬರು ಮೃತ್ಯು

Update: 2021-04-21 14:51 GMT

ಮಂಗಳೂರು, ಎ. 21: ದ.ಕ. ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಕಂಡು ಬರುತ್ತಿದ್ದು, ಬುಧವಾರ ಜಿಲ್ಲೆಯಲ್ಲಿ 401 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಈವರೆಗೆ 39,244 ಪಾಸಿಟಿವ್ ಪ್ರಕರಣಗಳು ಕಂಡು ಬಂದಂತಾಗಿದೆ. ಅದಲ್ಲದೆ 200 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ದ್ದಾರೆ. ಆದಾಗ್ಯೂ ಬುಧವಾರದವರೆಗೆ ಜಿಲ್ಲೆಯಲ್ಲಿ 2,472 ಸಕ್ರಿಯ ಪ್ರಕರಣಗಳಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮಧ್ಯೆ ನಗರದ ಸುಮಾರು 73 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್- 19ನಿಂದ ಮೃತಪಟ್ಟವರ ಸಂಖ್ಯೆ 745ಕ್ಕೇರಿದೆ.

ಜಿಲ್ಲೆಯಲ್ಲಿ ಈವರೆಗೆ 6,95,994 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಆ ಪೈಕಿ 6,56,750 ಮಂದಿಯ ವರದಿ ನೆಗೆಟಿವ್ ಬಂದಿದೆ. ಅಲ್ಲದೆ ಈವರೆಗೆ 36,024 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ಕಂಟೈನ್ಮೆಂಟ್ ವಲಯ ಘೋಷಣೆ: ಕೊರೋನ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಕಂಟೈನ್ಮೆಂಟ್ ವಲಯಗಳ ಸಂಖ್ಯೆಯೂ ಹೆಚ್ಚುತ್ತಿವೆ. ಜಿಲ್ಲೆಯಲ್ಲಿ ಬುಧವಾರ ನಾಲ್ಕು ಕಂಟೈನ್ಮೆಂಟ್ ವಲಯಗಳು ಘೋಷಣೆಯಾಗಿದೆ. ಆ ಮೂಲಕ ಜಿಲ್ಲೆಯ 20 ಕಡೆಗಳಲ್ಲಿ ಕಂಟೈನ್ ಮೆಂಟ್ ವಲಯಗಳಿವೆ.

ನಗರದ ಅಶೋಕ ನಗರದ ಲೇಡಿಸ್ ಹಾಸ್ಟೆಲ್ ನಲ್ಲಿ 7 ಪ್ರಕರಣ, ದೇರೆಬೈಲು ಕೊಂಚಾಡಿಯ ನರ್ಸಿಂಗ್ ಹಾಸ್ಟೆಲ್ನಲ್ಲಿ 5, ಬಜ್ಪೆಯ ಭಟ್ರಕೆರೆಯಲ್ಲಿ 8, ಬಜ್ಪೆಯ ಕೆಂಜಾರಿನ ಒಂದು ಮನೆಯ 5 ಮಂದಿಗೆ ಪಾಸಿಟಿವ್ ಆಗುವುದರೊಂದಿಗೆ ನಾಲ್ಕು ಕಂಟೈನ್ಮೆಂಟ್ ವಲಯ ಘೋಷಣೆ ಮಾಡಲಾಗಿದೆ.

4702 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಬುಧವಾರ 60 ವರ್ಷ ಮೇಲ್ಪಟ್ಟ 1,396 ಮಂದಿ ಮೊದಲನೇ ಡೋಸ್, 527 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 69 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲನೆ ಡೋಸ್, 159 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 21 ಮಂದಿ ಫ್ರಂಟ್‌ಲೈನ್ ವರ್ಕರ್ಸ್ ಮೊದಲನೇ ಡೋಸ್, 41 ಮಂದಿ ಎರಡನೇ ಡೋಸ್ ಲಸಿಕೆ ಪಡೆದು ಕೊಂಡಿದ್ದಾರೆ. 45 ರಿಂದ 60 ವರ್ಷದೊಳಗಿನ 2,342 ಮಂದಿ ಮೊದಲನೇ ಡೋಸ್, 147 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

ಜಿಲ್ಲೆಗೆ 22 ಸಾವಿರ ಡೋಸ್ ಲಸಿಕೆ: ಜಿಲ್ಲೆಯ ಕೆಲವು ಕಡೆಗಳಲ್ಲಿ ಮಂಗಳವಾರ ಮತ್ತು ಬುಧವಾರದಂದು ಲಸಿಕೆ ವಿತರಣೆಯಲ್ಲಿ ವಿಳಂಬವಾಗಿತ್ತು. ಮಂಗಳವಾರ ಮಧ್ಯಾಹ್ನ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆ ಸಂಗ್ರಹ ಮುಗಿದಿತ್ತು. ಹಾಗಾಗಿ ಕೆಲವು ಮಂದಿ ಆಸ್ಪತ್ರೆಗೆ ತೆರಳಿದ್ದರೂ ಲಸಿಕೆ ದೊರಕಿರಲಿಲ್ಲ. ಬುಧವಾರ ಬೆಳಗ್ಗೆ ಜಿಲ್ಲೆಗೆ 22,000 ಡೋಸ್ ಲಸಿಕೆ ಬಂದಿದೆ. 20,000 ಡೋಸ್ ಕೋವಿಶೀಲ್ಡ್ ಲಸಿಕೆ ಮತ್ತು 2,000 ಡೋಸ್ ಕೋವ್ಯಾಕ್ಸಿನ್ ಬೆಂಗಳೂರಿನಿಂದ ಪೂರೈಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದ್ದಾರೆ.

ದಂಡ: ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದುದಕ್ಕೆ ಸಂಬಂಧಿಸಿ ಈವರೆಗೆ 47,265 ಪ್ರಕರಣ ದಾಖಲಿಸಿ, 49,21,730 ರೂ. ದಂಡ ವಸೂಲಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News