ಉಡುಪಿ: 472 ಮಂದಿಯಲ್ಲಿ ಕೊರೋನ ಸೋಂಕು ಪತ್ತೆ

Update: 2021-04-21 15:12 GMT

ಉಡುಪಿ, ಎ.21: ಕೊರೋನ ಸಾಂಕ್ರಾಮಿಕ ಪ್ರಾರಂಭಗೊಂಡ ಬಳಿಕ ಉಡುಪಿ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯ ಪಾಸಿಟಿವ್ ಬುಧವಾರ ದಾಖಲಾಗಿದೆ. ಇಂದು ಜಿಲ್ಲೆಯಲ್ಲಿ ಒಟ್ಟು 471 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ಹಿಂದೆ ಕಳೆದ ವರ್ಷದ ಆಗಸ್ಟ್ ತಿಂಗಳ 18ರಂದು ಜಿಲ್ಲೆಯಲ್ಲಿ ಒಟ್ಟು 421 ಮಂದಿಗೆ ಪಾಸಿಟಿವ್ ಬಂದಿರುವುದೇ ಇದುವರೆಗಿನ ದಾಖಲೆಯಾಗಿತ್ತು.

ದಿನದಲ್ಲಿ 128 ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆಯೂ ಇದೀಗ ಮೂರು ತಿಂಗಳುಗಳ ಬಳಿಕ ಮತ್ತೆ ಒಂದು ಸಾವಿರದ ಗಡಿಯನ್ನು ದಾಟಿಸಿದೆ. ಇಂದು 1084 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ 471 ಮಂದಿಯಲ್ಲಿ 255 ಮಂದಿ ಪುರುಷರಾದರೆ, 216 ಮಂದಿ ಮಹಿಳೆಯರು. ಇವರಲ್ಲಿ 267 ಮಂದಿ ಉಡುಪಿ ತಾಲೂಕಿನವರಾದರೆ, 154 ಮಂದಿ ಕುಂದಾಪುರ ಹಾಗೂ 44 ಮಂದಿ ಕಾರ್ಕಳ ತಾಲೂಕಿನವರು. ಹೊರಜಿಲ್ಲೆಯಿಂದ ಚಿಕಿತ್ಸೆಗೆಂದು ಬಂದ ಆರು ಮಂದಿಯೂ ಸಹ ಇಲ್ಲಿ ಕೋವಿಡ್ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 45, ಉಡುಪಿಯಲ್ಲಿ 40, ಕೆಮ್ಮಣ್ಣುನಲ್ಲಿ 35, ಬ್ರಹ್ಮಾವರದಲ್ಲಿ 23, ಹಿರೇಬೆಟ್ಟು 14, ಕೋಟ ಪಿಎಚ್‌ಸಿ ಪ್ರದೇಶದಲ್ಲಿ 15 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಕೆಎಂಸಿ ಸೇರಿದಂತೆ ಜಿಲ್ಲೆಯ ಹಲವು ಶಾಲಾ-ಕಾಲೇಜುಗಳಲ್ಲಿ ಸಹ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ಮಾಹಿತಿ ದೊರೆತಿದೆ.

ಕುಂದಾಪುರ ತಾಲೂಕಿನ ಬೈಂದೂರು ಸಿಎಚ್‌ಸಿ 21, ಕುಂದಾಪುರ ಆಸ್ಪತ್ರೆ 20, ಕುಂಭಾಶಿ 16, ಕೋಟೇಶ್ವರ 10, ಸಿದ್ಧಾಪುರ 13 ಪ್ರಕರಣಗಳು ಕಂಡುಬಂದರೆ, ಕಾರ್ಕಳ ತಾಲೂಕಿ ಖಾಸಗಿ ಪದವಿ ಪೂರ್ವ ಕಾಲೇಜಿನಲ್ಲಿ 15 ಪ್ರಕರಣ ಕಂಡುಬಂದಿದೆ. ಇನ್ನು ಉತ್ತರ ಕನ್ನಡ (2), ಶಿವಮೊಗ್ಗ (2), ಬೆಂಗಳೂರು (1) ಹಾಗೂ ಧಾರವಾಡ(1)ದಿಂದ ಬಂದವರು ಪಾಸಿಟಿವ್ ಬಂದಿದ್ದಾರೆ.

ಮಂಗಳವಾರ 128 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 26,205ಕ್ಕೇರಿದೆ. ನಿನ್ನೆ ಜಿಲ್ಲೆಯ 2785 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 471 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 27,483 ಎಂದು ಡಾ.ಸೂಡ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,75,645 ಮಂದಿಯನ್ನು ಕೋವಿಡ್ ಪರೀಕ್ಷೆ ಗೊಳಪಡಿಸಲಾಗಿದೆ. ಇಂದು ಅಧಿಕೃತವಾಗಿ ಕೊರೋನಕ್ಕೆ ಯಾರೂ ಬಲಿಯಾಗಿಲ್ಲ. ಈವರೆಗೆ ಕೊರೋನದಿಂದ ಮೃತಪಟ್ಟವರ ಸಂಖ್ಯೆ194 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News