ಕೊರೋನ ಅವಧಿಯಲ್ಲಿ 1.84 ಲಕ್ಷ ಕೋಟಿ ಪ್ರೀಮಿಯಂ ಸಂಗ್ರಹಣೆ: ಎಲ್‌ಐಸಿ ದಾಖಲೆ

Update: 2021-04-21 15:15 GMT

ಮುಂಬೈ, ಎ.22: ಕಳೆದ ಆರ್ಥಿಕ ವರ್ಷವಿಡೀ ಕೊರೋನ ಸೋಂಕಿನ ಸವಾಲು ಎದುರಾಗಿದ್ದರೂ ದೇಶದ ಬೃಹತ್ ಜೀವವಿಮಾ ಸಂಸ್ಥೆ ಎಲ್‌ಐಸಿ ಈ ಅವಧಿಯಲ್ಲಿ ಗಮನಾರ್ಹ ಹೊಸ ವ್ಯವಹಾರ ಸಾಧಿಸಿದೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.

2020-21 ಆರ್ಥಿಕ ವರ್ಷದಲ್ಲಿ ಎಲ್‌ಐಸಿ ದಾಖಲೆ ಮೊತ್ತದ ಪ್ರಥಮ ವರ್ಷದ ಪ್ರೀಮಿಯಂ ಮೊತ್ತ (56,406 ಕೋಟಿ ರೂ.) ಸಂಗ್ರಹಿಸಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು 10.11% ಹೆಚ್ಚಳವಾಗಿದೆ. ಅಲ್ಲದೆ ಇದೇ ಅವಧಿಯಲ್ಲಿ 2.10 ಕೋಟಿ ಪಾಲಿಸಿ ಸಂಗ್ರಹಿಸಿದ್ದು ಮಾರ್ಚ್ ತಿಂಗಳಲ್ಲೇ 46.72 ಲಕ್ಷ ಪಾಲಿಸಿ ಸಂಗ್ರಹವಾಗಿದೆ. ಕಳೆದ ಆರ್ಥಿಕ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಇದು 298.82% ಹೆಚ್ಚಳವಾಗಿದೆ.

ಎಲ್‌ಐಸಿಯ ಪಿಂಚಣಿ ಮತ್ತು ಗುಂಪು ಯೋಜನೆಯೂ ಹೊಸ ದಾಖಲೆ ಬರೆದಿದ್ದು ಹೊಸ ಪ್ರೀಮಿಯಂ ಆದಾಯ 1,27,768 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದು 1,26,749 ಕೋಟಿ ರೂ. ಆಗಿತ್ತು. ಈ ಅವಧಿಯಲ್ಲಿ 3,45,469 ಏಜೆಂಟರ ಸೇರ್ಪಡೆಯಿಂದಾಗಿ ಎಲ್‌ಐಸಿ ಏಜೆಂಟರ ಸಂಖ್ಯೆ 13,53,808ಕ್ಕೇರಿದೆ.

ಈ ವರ್ಷ ಎಲ್‌ಐಸಿಯ 16,564 ಏಜೆಂಟರು ಎಂಡಿಆರ್‌ಟಿ(ಮಿಲಿಯನ್ ಡಾಲರ್ ರೌಂಡ್ ಟೇಬಲ್)ಗೆ ಅರ್ಹತೆ ಪಡೆದಿದ್ದು ಇದೂ ಹೊಸ ದಾಖಲೆಯಾಗಿದೆ. 2020-21ರಲ್ಲಿ ಎಲ್‌ಐಸಿಯ ಬಿಆ್ಯಂಡ್‌ಎಸಿ ಯೋಜನೆಯಡಿ 2,46,910 ಪಾಲಿಸಿ ಹಾಗೂ 1862.73 ಕೋಟಿ ರೂ. ಪ್ರೀಮಿಯಂ ಸಂಗ್ರಹಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಕ್ರಮವಾಗಿ 0.58% ಮತ್ತು 23.46% ಹೆಚ್ಚಳವಾಗಿದೆ. ಯುನಿಟ್ ಲಿಂಕ್ಡ್ ಇನ್ಷೂರೆನ್ಸ್ ಯೋಜನೆಯಡಿ 90,000ಕ್ಕೂ ಹೆಚ್ಚಿನ ಯೋಜನೆಗಳಿಂದ 800 ಕೋಟಿ ರೂ.ಗೂ ಅಧಿಕ ಪ್ರೀಮಿಯಂ ಹಣ ಸಂಗ್ರಹಿಸಲಾಗಿದೆ.

ಯುನಿಟ್ ಲಿಂಕ್ಡ್ ಇನ್ಷೂರೆನ್ಸ್ ಯೋಜನೆಯಡಿ ಖರೀದಿಸಿದ ಪಾಲಿಸಿಯ ಈಗಿನ ನಿವ್ವಳ ಮಾರುಕಟ್ಟೆ ಮೌಲ್ಯ(ಎನ್‌ಎವಿ)ಯ ವಿವರ, ಪೋರ್ಟ್‌ಫೋಲಿಯೊ ಮತ್ತು ಬದಲಾಯಿಸುವ ಆಯ್ಕೆ ಈಗ ಆನ್‌ಲೈನ್‌ನಲ್ಲಿಯೂ ಲಭ್ಯವಿದೆ. ಕೊರೋನ ಸೋಂಕಿನಿಂದ ಎದುರಾದ ಬಿಕ್ಕಟ್ಟಿನ ಮಧ್ಯೆಯೂ 2020-21ರ ಆರ್ಥಿಕ ವರ್ಷದಲ್ಲಿ ಎಲ್‌ಐಸಿ 2.19 ಕೋಟಿ ಮೆಚ್ಯುರಿಟಿ ಕ್ಲೇಮ್(ಅವಧಿ ಪೂರ್ಣವಾದ ಪಾಲಿಸಿಯ ಮರುಪಾವತಿ), 1,16,265.15 ಕೋಟಿ ಮನಿ ಬ್ಯಾಕ್ ಕ್ಲೇಮ್ ಇತ್ಯರ್ಥಗೊಳಿಸಿದೆ. ಇದೇ ಅವಧಿಯಲ್ಲಿ 18,137.34 ಕೋಟಿ ರೂ. ಮೊತ್ತದ 9.59 ಲಕ್ಷ ಡೆತ್‌ಕ್ಲೇಮ್(ಪಾಲಿಸಿದಾರ ಮರಣ ಹೊಂದಿದ ಸಂದರ್ಭ ಇತ್ಯರ್ಥಗೊಳಿಸುವುದು) ಇತ್ಯರ್ಥಗೊಳಿಸಲಾಗಿದೆ. ಮಾರ್ಚ್ 2021ಕ್ಕೆ ಪಾವತಿಯಾಗಬೇಕಿದ್ದ ವಾರ್ಷಿಕ ಪಾವತಿಗಳನ್ನೂ ಸಕಾಲದಲ್ಲಿ ಇತ್ಯರ್ಥಗೊಳಿಸಲಾಗಿದೆ.

ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸಲು ಹಲವು ಡಿಜಿಟಲ್ ಉಪಕ್ರಮಗಳನ್ನು ಎಲ್‌ಐಸಿ ಆರಂಭಿಸಿದೆ. ಪ್ರೀಮಿಯಂ ಪಾವತಿ, ನವೀಕರಣ, ಸಾಲ ಮತ್ತು ಸಾಲದ ಮೇಲಿನ ಬಡ್ಡಿಯ ಪಾವತಿ ಈಗ ಆನ್‌ಲೈನ್‌ನಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ಯುಪಿಐ, ಪೇಟಿಎಂ, ಫೋನ್‌ಪೆ, ಗೂಗಲ್ ಪೇ, ಅಮಝಾನ್ ಪೇ ಮತ್ತಿತರ ವ್ಯವಸ್ಥೆಯ ಮೂಲಕ ಸಾಧ್ಯವಾಗಿದೆ. ಸಾಲಕ್ಕೆ ಅರ್ಜಿ ಸಲ್ಲಿಸುವುದು, ವಿಳಾಸ ಬದಲಾವಣೆ, ಪ್ಯಾನ್ ಕಾರ್ಡ್ ಮತ್ತಿತರ ಗುರುತು ಪತ್ರಗಳ ವಿವರ ಒದಗಿಸುವುದು ಮತ್ತಿತರ ಪ್ರಕ್ರಿಯೆ ಈಗ ಆನ್‌ಲೈನ್‌ನಲ್ಲಿ ಉಚಿತವಾಗಿ ನಡೆಸಬಹುದಾಗಿದೆ. ಎಲ್‌ಐಸಿಡಾಕ್‌ಕ್ಯೂ ಎಂಬ ಮೊಬೈಲ್ ಆ್ಯಪ್ ಮೂಲಕ ಗ್ರಾಹಕರು ಎಲ್ಲಿದ್ದರೂ ತಮ್ಮ ಪಾಲಿಸಿಗಳನ್ನು ಪುನರುಜ್ಜೀವನ ಗೊಳಿಸಬಹುದು. ಸವಾಲುಗಳನ್ನು ಎದುರಿಸಿ ದಾಖಲೆ ಬರೆಯಲು ಕಾರಣೀಕರ್ತರಾದ ಉದ್ಯೋಗಿಗಳು, ಏಜೆಂಟರು ಹಾಗೂ ವಿವಿಧ ಪಾಲಿಸಿಗಳ ಸಹಭಾಗಿಗಳು ಮತ್ತು ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಎಲ್‌ಐಸಿಯ ಪ್ರಕಟಣೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News