ಮಗನ ಸನ್ಯಾಸ ಸ್ವೀಕಾರಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದೆವು: ಡಾ.ಸರಳತ್ತಾಯ

Update: 2021-04-21 15:21 GMT

ಉಡುಪಿ, ಎ.21: ‘ಅನಿರುದ್ಧ ನಮಗೆ ಏಕೈಕ ಪುತ್ರನಾದರೂ, ಆತನ ಜಾತಕ ನೋಡಿದಾಗಲೇ ಆತನಲ್ಲಿ ಯತಿ ಧರ್ಮ ಹಾಗೂ ಶಾಸ್ತ್ರ ಅಧ್ಯಯನ ಇರುವುದು ಕಂಡುಬಂದಿತ್ತು. ಬಹಳಷ್ಟು ಮಂದಿಗೆ ಇದನ್ನು ತೋರಿಸಿದಾಗ ಅವರೂ ಇದೇ ಅಭಿಪ್ರಾಯ ನೀಡಿದರು. ಹೀಗಾಗಿ ಮಗನ ಸನ್ಯಾಸ ಸ್ವೀಕಾರಕ್ಕೆ ನಾವು ಮಾನಸಿಕವಾಗಿ ಸಿದ್ಧರಾಗಿದ್ದೆವು.’ ಎಂದು ಶಿರೂರು ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಉಡುಪಿಯ ಅನಿರುದ್ಧ ಸರಳತ್ತಾಯರ ತಂದೆ ಡಾ.ಎಂ.ಉದಯ ಕುಮಾರ್ ಸರಳತ್ತಾಯ ಹಾಗೂ ತಾಯಿ ಶ್ರೀವಿದ್ಯಾ ನುಡಿದರು.

ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠದಲ್ಲಿ ಶಿರೂರು ಮಠದ ದ್ವಂದ್ವ ಮಠವಾದ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥರು ಶಿರೂರು ಮಠದ ಉತ್ತರಾಧಿಕಾರಿಯ ಘೋಷಣೆ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಮಗನೊಂದಿಗೆ ಉಪಸ್ಥಿತರಿದ್ದ ಅವರು ಈ ವಿಷಯ ತಿಳಿಸಿದರು.

ಅನಿರುದ್ಧ ಚಿಕ್ಕ ವಯಸ್ಸಿನಿಂದಲೂ ದೇವರು ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಉಳ್ಳವನಾಗಿದ್ದು, ಮನೆಯಲ್ಲಿ ಉಳಿದ ಶಿಷ್ಯರೊಂದಿಗೆ ಆತನೂ ವೇದಾಧ್ಯಯನದಲ್ಲಿ ನಿರತನಾಗಿದ್ದ. ಮಠ, ಸಂಪ್ರದಾಯ, ಆಚರಣೆಗಳು, ವಿಧಿವಿದಾನಗಳ ಬಗ್ಗೆ ಆಸಕ್ತನಾಗಿದ್ದ. ಶಿರೂರು ಮಠಕ್ಕೆ ಯತಿಯಾಗಿ ತೆರಳುವ ಬಗ್ಗೆ ಆತನೇ ನಮಗೆ ತಿಳಿಸಿದ್ದ. ಹೀಗಾಗಿ ಮೊದಲ ಬಾರಿ ಆತ ಈ ಮಾತನ್ನು ಹೇಳಿದಾಗಲೇ ನಾವು ಒಪ್ಪಿಗೆ ಸೂಚಿಸಿದೆವು ಎಂದು ಉದಯಕುಮಾರ್ ಸರಳತ್ತಾಯ ನುಡಿದರು.

ತಾಯಿ ಶ್ರೀವಿದ್ಯಾ ಮಾತನಾಡಿ, ಚಿಕ್ಕ ವಯಸ್ಸಿನಿಂದಲೂ ಆತ ಪೂಜೆ, ಉಪವಾಸದ ಬಗ್ಗೆ ಹೆಚ್ಚು ಒಲವು ತೋರುತಿದ್ದ. ಆದ್ಯಾತ್ಮಿಕತೆಯತ್ತ ಆತನ ಒಲವಿನಿಂದಾಗಿ ಆತನಿಗೆ ಸನ್ಯಾಸ ಯೋಗವಿರುವುದು ನಮಗೆ ಖಚಿತವಾಗಿ ಆತನ ಸನ್ಯಾಸ ಸ್ವೀಕಾರ ವನ್ನು ಖುಷಿಯಿಂದಲೇ ಒಪ್ಪಿಕೊಂಡಿದ್ದೇವೆ ಎಂದರು. ಇವರಿಗೆ ಹಿರಣ್ಮಯಿ ಎಂಬ ಮಗಳಿದ್ದಾಳೆ.

ಡಾ.ಉದಯಕುಮಾರ ಸರಳತ್ತಾಯ ಕುಟುಂಬ ಮೂಲತ: ಉಡುಪಿಯದ್ದಾದರೂ, ಅವರ ಪೂರ್ವಜರು ದೇವಸ್ಥಾನದ ಪೂಜೆಗೆಂದು ತೆರಳಿ ಧರ್ಮಸ್ಥಳ ಸಮೀಪದ ನಿಡ್ಲೆಯಲ್ಲಿ ನೆಲೆಸಿದ್ದರು. ಉಡುಪಿಯಲ್ಲಿ ವೇದಾಭ್ಯಾಸ ನಡೆಸಿ, ಉಡುಪಿಯ ಸಂಸ್ಕೃತ ಕಾಲೇಜು, ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ಬಿ.ಎಡ್. ಹಾಗೂ ಪಿಎಚ್‌ಡಿ ಮುಗಿಸಿದ್ದರು.

''ನನಗೆ ಮೊದಲಿನಿಂದಲೂ ಕೃಷ್ಣನ ಪೂಜೆ ಮಾಡುವ ಆಶೆ ಇತ್ತು. ಸನ್ಯಾಸಾಶ್ರಮ ವಿಷಯದ ಬಗ್ಗೆಯೂ ನನಗೆ ತಿಳಿದಿದೆ. ತಂದೆಯವರು ನನಗೆ ಎಲ್ಲವನ್ನೂ ತಿಳಿಸಿದ್ದಾರೆ. ಅವರ ಬಳಿಯೇ ನಾನು ಸಂಸ್ಕೃತದ ಮೂಲ ಅಧ್ಯಯನ, ವೇದಾದ್ಯಯನ ನಡೆಸುತಿದ್ದೇನೆ. ಶಿರೂರು ಮಠದ ಯತಿಯಾಗುವ ಇಚ್ಛೆಯನ್ನು ನಾನೇ ತಂದೆಯವರ ಬಳಿ ಹೇಳಿದ್ದೆ. ಮುಂದೆ ಶಾಸ್ತ್ರಾಭ್ಯಾಸ, ವೇದಾಂತ ಅಧ್ಯಯನವನ್ನು ನಡೆಸುತ್ತೇನೆ. ಅದರೊಂದಿಗೆ ಲೌಕಿಕ ಅಧ್ಯಯನವನ್ನೂ ಮುಂದುವರಿಸುತ್ತೇನೆ''.
 -ಅನಿರುದ್ಧ ಸರಳತ್ತಾಯ, ಶಿರೂರು ಮಠದ ಉತ್ತರಾಧಿಕಾರಿಯಾಗಲು ಆಯ್ಕೆಯಾದ ವಟು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News