ಕೊರೋನ ಬಗ್ಗೆ ಅಸಡ್ಡೆ ಬೇಡ; ಎಚ್ಚರ ತಪ್ಪಬೇಡಿ: ಪೇಜಾವರಶ್ರೀ

Update: 2021-04-21 16:01 GMT

ಉಡುಪಿ, ಎ.21: ಸಾಂಕ್ರಾಮಿಕ ಮಹಾಮಾರಿ ಕೊರೋನ ದೇಶವನ್ನು ಅತಿಯಾಗಿ ಕಾಡುತ್ತಿದೆ. ದಿನಗಳೆದಂತೆ ಬಗೆ ಬಗೆಯ ರೂಪಾಂತರ ಪಡೆದು ಜನರನ್ನು ಭಾದಿಸುತ್ತಾ ಇದೆ. ಹೀಗಾಗಿ ಸಮಾಜದ ಎಲ್ಲರೂ ಲಸಿಕೆಯನ್ನು ಪಡೆದುಕೊಳ್ಳಬೇಕು, ಜೊತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು ಸಾರ್ವಜನಿಕರಿಗೆ ಕಿವಿಮಾತು ಹೇಳಿದ್ದಾರೆ.

ರಥಬೀದಿಯ ಪುತ್ತಿಗೆ ಮಠದಲ್ಲಿ ಇಂದು ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.

ಸರಕಾರ ನಮ್ಮ ಹಿತಕ್ಕಾಗಿ ಮಾಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸೋಣ. ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಅನುಸರಿಸೋಣ. ಕೊರೋನದ ಬಗ್ಗೆ ಅಸಡ್ಡೆ ಬೇಡ; ಎಚ್ಚರ ತಪ್ಪದಿರೋಣ ಎಂದವರು ನುಡಿದರು.

ರೋಗ ತಮಗೆ, ತಮ್ಮ ಕುಟುಂಬಕ್ಕೆ ಬಾಧಿಸಿದಾಗ ಮಾತ್ರ ಎಚ್ಚರಗೊಳ್ಳದೇ, ಇತರರ ನೋವಿಗೂ ಸ್ಪಂದಿಸೋಣ. ಆದುದರಿಂದ ಎಲ್ಲರೂ ಮುಖಗವಸು (ಮಾಸ್ಕ್) ಧರಿಸಿ, ಸುರಕ್ಷತಾ ಅಂತರವನ್ನು ಕಾಪಾಡಿಕೊಳ್ಳೋಣ. ನಮ್ಮ ಅಸಡ್ಡೆಯಿಂದ ರೋಗ ಇನ್ನಷ್ಟು ಉಲ್ಹಣಿಸುತ್ತದೆ. ಹೀಗಾಗಿ ಸರಕಾರದ ನಿಯಮಗಳನ್ನು ವಿಧಿವತ್ತಾಗಿ ಪಾಲಿಸೋಣ. ಎಚ್ಚರ ತಪ್ಪಿದರೆ ಸಮಾಜವನ್ನು ಉಳಿಸಲು ಯಾರಿದಂಲೂ ಸಾಧ್ಯವಿಲ್ಲ ಎಂದು ಪೇಜಾವರಶ್ರೀ ನುಡಿದರು.

ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ ವಿಧಿಸಿರುವ ಬಗ್ಗೆ ಪ್ರಶ್ನಿಸಿದಾಗ, ಧರ್ಮವೂ ಮೊದಲು ನಿಮ್ಮನ್ನು ರಕ್ಷಿಸಿಕೊಳ್ಳಿ, ನೀವಿದ್ದರೆ ಧರ್ಮ ಎಂದೇ ಹೇಳುತ್ತದೆ. ಆದುದರಿಂದ ಮೊದಲು ನಮ್ಮ ನಮ್ಮ ಆರೋಗ್ಯದತ್ತ ಗಮನ ಕೊಡೋಣ. ಬಳಿಕ ಅಗತ್ಯವಿರುವ ಧಾರ್ಮಿಕ ಕಾರ್ಯಕ್ರಮಗಳನ್ನು ವೈಭವೀಕರಿಸದೇ, ಸೂಕ್ಷ್ಮವಾಗಿ ಮಾಡೋಣ. 10 ಮಂದಿ ಸೇರಿ ಮಾಡುವ ಉತ್ಸವವನ್ನು ಮುಂದೂಡಿದರೆ ತಪ್ಪಿಲ್ಲ ಎಂದರು.

ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನಕ್ಕೂ ಈಗ ನಿರ್ಬಂಧ ವಿಧಿಸಲಾಗಿದೆ. ಸಮಾಜದ ಹಿತದೃಷ್ಟಿಯಿಂದ ಇದನ್ನು ಪಾಲಿಸಬೇಕು ಎಂದವರು ನುಡಿದರು. ಶ್ರೀರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ 2500 ಕೋಟಿ ರೂ.ಸಂಗ್ರಹವಾಗಿದೆ. ಜನ ಇನ್ನೂ ಹಣ ನೀಡುತಿದ್ದಾರೆ. ಅದು 3000 ಕೋಟಿ ರೂ.ವನ್ನು ದಾಟಬಹುದು ಎಂದು ಶ್ರೀವಿಶ್ವಪ್ರಸನ್ನ ತೀರ್ಥ ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News