ಅಧಿಕಾರಿಗಳ ವಿರುದ್ಧ ಹಸಿರು ಪೀಠಕ್ಕೆ ದೂರು: ದಿನೇಶ್ ಗಾಣಿಗ

Update: 2021-04-21 16:30 GMT

ಕುಂದಾಪುರ, ಎ.21: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಸಮೀಪ ಹರಿಯುವ ಅಗ್ನಿತೀರ್ಥ ನದಿ ಸಂಪೂರ್ಣ ಕಲುಷಿತಗೊಂಡಿರುವುದರಿಂದ ಜಲಚರಗಳು ಸಾಯುತ್ತಿದ್ದು, ಇದಕ್ಕೆ ಜಿಲ್ಲಾಡಳಿತದ ನಿಷ್ಕ್ರೀಯತೆಯೇ ಕಾರಣ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾ ದಿನೇಶ್ ಗಾಣಿಗ ಕೋಟ ತಿಳಿಸಿದ್ದಾರೆ.

ಕುಂದಾಪುರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸಮಾನ ಮನಸ್ಕರು ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಸರಕಾರದಿಂದ ಯಾವುದೇ ನ್ಯಾಯ ದೊರೆತಿಲ್ಲ. ಈ ಸಂಬಂಧ ಉಡುಪಿ ಡಿಸಿ, ಕುಂದಾಪುರ ಎಸಿ, ತಹಶಿಲ್ದಾರ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಹಸಿರು ಪೀಠಕ್ಕೆ ದೂರು ನೀಡಲಾಗುವುದು ಮತ್ತು ಸಮಾನ ಮಾನಸ್ಕ ರೊಡಗೂಡಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ದಾವೆ ಹೂಡಿ ಕಾನೂನು ಹೋರಾಟ ನಡೆಸಲಾಗುವುದು ಎಂದರು.

ಅಗ್ನಿತೀರ್ಥ ನದಿಯ ಎರಡೂ ದಡದಲ್ಲಿರುವ ಕಲ್ಯಾಣಮಂಟಪ, ವಸತಿಗೃಹ, ಹೋಟೆಲ್ ಸೇರಿದಂತೆ ಅನೇಕ ವಾಣಿಜ್ಯ ಕಟ್ಟಡಗಳ ತ್ಯಾಜ್ಯ ನೀರು ನದಿಯನ್ನು ಸೇರುತ್ತಿದೆ. ದೇವಸ್ಥಾನಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತರು ಉಪಯೋಗಿಸಿ ಎಸೆದಿರುವ ಘನ ತ್ಯಾಜ್ಯ ಗಳು ಕೂಡ ನದಿಯನ್ನು ಸೇರಿಕೊಂಡು ಸೌಪರ್ಣಿಕ ನದಿಯು ವಿಷಪೂರಿತ ಕಲುಷಿತ ತೀರ್ಥವಾಗುತ್ತಿದೆ ಎಂದು ಅವರು ಆರೋಪಿಸಿದರು.

ವರ್ಷದ ಮಳೆಗಾಲದ ಮೂರು ತಿಂಗಳನ್ನು ಹೊರತುಪಡಿಸಿ ಉಳಿದ ಋತುಗಳಲ್ಲಿ ನೀರಿನ ನಿರಂತರ ಹರಿಯುವಿಕೆ ಇಲ್ಲದೆ ಇರುವುದರಿಂದ ವಿಷಪೂರಿತ ನೀರನ್ನು ಕುಡಿದು ಇಲ್ಲಿನ ಅಮುಲ್ಯ ಮತ್ಸ ಸಂಪತ್ತು, ಜಲಚರಗಳು ಹಾಗೂ ಮೂಕಾಂಬಿಕಾ ಅಭಯರಣ್ಯದ ಪ್ರಾಣಿ-ಸಂಕುಲಗಳು ದೊಡ್ಡ ಪ್ರಮಾಣದಲ್ಲಿ ಜೀವ ಕಳೆದುಕೊಳ್ಳುತ್ತಿವೆ. ಪರಿಸರದ ಜನರು ಸಾಂಕ್ರಾಮಿಕ ಕಾಯಿಲೆ ಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅವರು ದೂರಿದರು.

ಸಾಮಾಜಿಕ ಕಾರ್ಯಕರ್ತ ಹರೀಶ್ ತೋಳಾರ್ ಕೊಲ್ಲೂರು ಮಾತನಾಡಿ, ಸೌಪರ್ಣಿಕ ನದಿಯ ಮಾಲೀನ್ಯತೆಯ ಬಗ್ಗೆ ಅರಿವು ಇಲ್ಲದ ಭಕ್ತರು ಈ ವಿಷಪೂರಿತ ನೀರಿನಲ್ಲೇ ಪುಣ್ಯ ಸ್ನಾನ ಮಾಡುವುದರಿಂದ ಚರ್ಮ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಈ ಕುರಿತು ಸಾಕಷ್ಟು ದೂರುಗಳನ್ನು ನೀಡಿದ್ದರೂ ಯಾವುದೇ ಸರಕಾರದ ಪರಿಹಾರಕ್ಕೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿವೇಕ್ ಜಿ.ಸುವರ್ಣ, ಧನಂಜಯ್ ಕುಂದಾಪುರ, ರಾಜೇಂದ್ರ ಸಂಗಮ್ ಹಾಜರಿದ್ದರು.

ನದಿ, ಅರಣ್ಯ ಭೂಮಿ ಅತಿಕ್ರಮಣ

ನದಿ ಹಾಗೂ ಅರಣ್ಯ ಭೂಮಿಯನ್ನು ಅತಿಕ್ರಮಿಸಿ, ಅನಧಿಕೃತ ವಸತಿಗೃಹ ಹಾಗೂ ಹೋಟೆಲ್‌ಗಳನ್ನು ನಿರ್ಮಿಸಲಾಗಿದೆ. ಕೊಲ್ಲೂರು ಗ್ರಾಮದ ಸರ್ವೇ ನಂಬ್ರ: 56ರಲ್ಲಿರುವ ಒಟ್ಟು 15,764.48 ಎಕರೆ ಭೂಮಿಯಲ್ಲಿ 2.20 ಎಕರೆ ಕೊಲ್ಲೂರು ದೇವಸ್ಥಾನದ ಭೂಮಿಯಾಗಿದೆ. 0.20ಎಕರೆ ಸ್ಮಶಾನಕ್ಕೆ ಮೀಸಲಿಡ ಲಾಗಿದೆ. ಬಾಕಿ ಉಳಿದಿರುವ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಇದರಲ್ಲಿ 866.75 ಎಕರೆ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ ಎಂದು ಹರೀಶ್ ತೋಳಾರ್ ಕೊಲ್ಲೂರು ತಿಳಿಸಿದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ವಿರೋಧ ಸಂರಕ್ಷಣಾ ಮೀಸಲು ಅರಣ್ಯ ಭೂಮಿಯನ್ನು ಹಾಗೂ ನದಿ ಪ್ರದೇಶವನ್ನು ಅತಿಕ್ರಮಿಸಿ ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ಹಣವನ್ನು ವೆಚ್ಚ ಮಾಡಿರುವವರ ಕುರಿತು ಸರಕಾರ ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಯನ್ನು ನಡೆಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News