ಸಮರೋಪಾದಿಯಲ್ಲಿ ಕೋವಿಡ್ ನಿಯಂತ್ರಿಸಲು ಸಜ್ಜಾಗಿ- ಬಸವರಾಜ್ ಬೊಮ್ಮಾಯಿ

Update: 2021-04-21 16:46 GMT

ಉಡುಪಿ : ಮುಂಬೈ, ಬೆಂಗಳೂರು, ಇತರೆ ಜಿಲ್ಲೆ  ಮತ್ತು ಹೊರ ರಾಜ್ಯಗಳಿಂದ ಬರುವ ಜನರ ಮೇಲೆ ನಿಗಾ ಇರಿಸಿ ಅವರನ್ನು ತಪಾಸಣೆ ಮಾಡುವುದರ ಜೊತೆಗೆ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಸಜ್ಜಾಗುವಂತೆ ಉಡುಪಿ ಜಿಲ್ಲಾಡಳಿತಕ್ಕೆ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಆದೇಶ ನೀಡಿದರು.

ಬುಧವಾರ ಬೆಂಗಳೂರಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉಡುಪಿ ಜಿಲ್ಲಾಡಳಿತದ ಜತೆ  ನಡೆಸಿದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಕಳೆದ ಬಾರಿ ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಉಡುಪಿಗೆ ಬಂದಿದ್ದರು‌. ಹೀಗಾಗಿ ಉಡುಪಿಯ ಸ್ಥಿತಿ ಬಿಗಡಾಯಿಸಿತು.  ಈ ಬಾರಿಯೂ ಹಾಗಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬೆಂಗಳೂರು-ಮುಂಬೈ ಮತ್ತು ಇತರ ಕಡೆಗಳಿಂದ ಬರುವ ಜನರನ್ನು ತಪಾಸಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಆದೇಶ ನೀಡಿದರು. 

ಕಳೆದ ಬಾರಿಯ ಅನುಭವವನ್ನು ಆಧಾರವಾಗಿಟ್ಟುಕೊಂಡು ಈ ಬಾರಿ ಕೋವಿಡ್ ನಿಯಂತ್ರಿಸಲು ಸಮರೋಪಾದಿಯಲ್ಲಿ  ಸಜ್ಜಾಗುವಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸದ್ಯಕ್ಕೆ ಉಡುಪಿಯಲ್ಲಿ ಹೆಚ್ಚು ಪ್ರಕರಣಗಳು ಇಲ್ಲ.  ಆದರೆ ಕೋವಿಡ್ ಎರಡನೆಯ ಅಲೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಅಪಾಯ ಕಾಣಿಸುತ್ತಿದೆ.  ಹೀಗಾಗಿ ಈಗಿನಿಂದಲೇ ಟೆಸ್ಟಿಂಗ್ ಹೆಚ್ಚು ಮಾಡಿ.  ಟೆಸ್ಟ್ ರಿಪೋರ್ಟನ್ನು ಬೇಗನೆ ಕೊಡಲು ವ್ಯವಸ್ಥೆ ಮಾಡಿ. ಟೆಸ್ಟಿಂಗ್ ಗೆ ಖಾಸಗಿ ಲ್ಯಾಬ್ ಗಳನ್ನು ಬಳಕೆ ಮಾಡಿಕೊಳ್ಳಿ. ಸೋಂಕು ತಗುಲಿದ ವ್ಯಕ್ತಿಯ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಇರುವ ಮೂವತ್ತು ಜನರ ಟೆಸ್ಟಿಂಗ್ ಅನ್ನು ಕಡ್ಡಾಯವಾಗಿ ಮಾಡಬೇಕು.  ಆಕ್ಸಿಜನ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳಿ. ರೆಮ್ ಡಿಸಿವಿರ್ ಔಷಧವನ್ನು ಈಗಲೇ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆ ಮಾಡಿಟ್ಟುಕೊಳ್ಳಿ. ಲಸಿಕೆ ಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಹಾಕಿಸಿ ಎಂದು ಅವರು ತಾಕೀತು ಮಾಡಿದರು. 

ಕೋವಿಡ್ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಇನ್ನಷ್ಟು  ಬಿಗಡಾಯಿಸಲಿದೆ. ಆದರೆ ಜಿಲ್ಲಾಡಳಿತ ಇನ್ನೂ ಪೂರ್ವ ತಯಾರಿ ಮಾಡಿಕೊಂಡಂತೆ ಕಾಣಿಸುತ್ತಿಲ್ಲ. ಮುಂದಿನ ನಾಲ್ಕೈದು ದಿನಗಳಲ್ಲಿ ಕಾಮಿಡಿ ನಿಯಂತ್ರಿಸಲು ಸಕಲ ರೀತಿಯಲ್ಲಿ ಸಜ್ಜಾಗಿ ಟೆಸ್ಟಿಂಗ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿ ಎಂದು ಜಿಲ್ಲಾಡಳಿತಕ್ಕೆ ಸಚಿವ ಬೊಮ್ಮಾಯಿ ತಾಕೀತು ಮಾಡಿದರು.

ಸಭೆಯಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್ ಕಾಪು ಶಾಸಕರಾದ ಶ್ರೀ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಷ್ಣುವರ್ಧನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್ ಸೂಡ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಮಧುಸೂದನ್ ನಾಯಕ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ. ಪ್ರಶಾಂತ್, ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News