×
Ad

ದ.ಕ. ಜಿಲ್ಲಾ ಕಾಂಗ್ರೆಸ್‌ನಿಂದ ‘ಬ್ರೇಕ್ ದಿ ಚೈನ್’ ಜಾಗೃತಿ ಅಭಿಯಾನ

Update: 2021-04-21 22:40 IST

ಮಂಗಳೂರು, ಎ.21: ಕೋವಿಡ್ 2ನೇ ಅಲೆ ತಡೆಯುವ ನಿಟ್ಟಿನಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ‘ನಮ್ಮ ಆರೋಗ್ಯ, ನಮ್ಮ ಹೊಣೆ' ಪರಿಕಲ್ಪನೆಯಲ್ಲಿ ‘ಬ್ರೇಕ್ ದಿ ಚೈನ್’ ಎಂಬ ಜಾಗೃತಿ ಅಭಿಯಾನವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡಿದೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ, ಕಾಂಗ್ರೆಸ್ ಕೋವಿಡ್ ಹೆಲ್ಫ್‌ಲೈನ್ ಮೂಲಕ ಈ ಅಭಿಯಾನ ನಡೆಯಲಿದೆ ಎಂದರು.

ಕಾಂಗ್ರೆಸ್ ಎನ್‌ಎಸ್‌ಯುಐ ಹಾಗೂ ಕಾಂಗ್ರೆಸ್‌ನ ವಿವಿಧ ಸಂಘಟನೆಗಳು ಅಭಿಯಾನದಲ್ಲಿ ಕೈಜೋಡಿಸಲಿವೆ. ಕೋವಿಡ್‌ಗೆ ಚಿಕಿತ್ಸೆ ಪಡೆಯುವುದು ಒಂದೆಡೆಯಾದರೆ, ಇನ್ನೊಂದು ಕಡೆಯಲ್ಲಿ ಕೋವಿಡ್ ಸೋಂಕು ಪಸರಿಸುವುದನ್ನು ತೆಗಟ್ಟುವುದು ಅಷ್ಟೇ ಮುಖ್ಯವಾ ಗಿದೆ. ಇದಕ್ಕಾಗಿ ಅಸಂಘಟಿತ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳನ್ನು ಗಮನದಲ್ಲಿ ಇರಿಸಿಕೊಂಡು ಅಂಗಡಿ ಮುಂಗಟ್ಟು, ಬಸ್ಟೇಂಡ್, ಸಾರ್ವಜನಿಕ ಸ್ಥಳ ಮುಂತಾದ ಕಡೆಗಳಲ್ಲಿ ಪೋಸ್ಟರ್ ಹಂಚಿ ಜಾಗೃತಿ ಮೂಡಿಸಲಾಗುವುದು ಎಂದವರು ಹೇಳಿದರು.

ದ.ಕ. ಜಿಲ್ಲೆಯಲ್ಲಿ ವ್ಯಾಕ್ಸಿನ್ ಕಡಿಮೆ ಇದೆ, ತರಿಸಿಕೊಳ್ಳುವುದಾಗಿ ಮಂಗಳವಾರ ಭೇಟಿ ಮಾಡಿದಾಗ ಜಿಲ್ಲಾಧಿಕಾರಿ ಹೇಳಿದ್ದಾರೆ. ಕೋವಿಡ್ ಸೋಂಕು ಹರಡುತ್ತಿರುವಾಗ ವ್ಯಾಕ್ಸಿನ್ ಸಂಗ್ರಹ ಇರಬೇಕಾಗಿತ್ತು. ಈ ಬಗ್ಗೆ ಜಿಲ್ಲೆಯ ಉಸುತಿವಾರಿ ಸಚಿವರು, ಶಾಸಕರು ಮೌನವಾಗಿದ್ದಾರೆ ಎಂದು ಐವನ್ ಡಿಸೋಜಾ ಆರೋಪಿಸಿದರು.

ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಬೈಕಂಪಾಡಿಯ ಮೂರು ಘಟಕಗಳಿಂದಲೂ ಆಕ್ಸಿಜನ್‌ನ್ನು ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಗೆ ಪೂರೈಸಲು ಮೀಸಲಿಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾಗಿ ಐವನ್ ಡಿಸೋಜಾ ಹೇಳಿದರು.

ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಬೋಳೂರು ಸ್ಮಶಾನದಲ್ಲಿ 8 ಸಾವಿರ ರು. ದರ ವಿಧಿಸಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಇಂತಹ ದುಬಾರಿ ದರ ವಸೂಲಿ ಮಾಡುವ ಬದಲು ಜಿಲ್ಲಾಡಳಿತದಿಂದಲೇ ಉಚಿತವಾಗಿ ಶವ ಸಂಸ್ಕಾರ ನಡೆಸಲು ಅವಕಾಶ ನೀಡಬೇಕು. ಇದಕ್ಕಾಗಿ ನೋಡೆಲ್ ಅಧಿಕಾರಿಯನ್ನು ನೇಮಿಸಬೇಕು. ಶವ ಹೂಳುವವರಿಗೆ ನಿಗದಿತ ಸ್ಮಶಾನವನ್ನು ಗುರುತಿಸಬೇಕು. ಆಸ್ಪತ್ರೆಗಳಲ್ಲಿ ಕುಂದುಕೊರತೆ ನೋಡಿಕೊಳ್ಳಲು ಪ್ರತ್ಯೇಕ ನೋಡೆಲ್ ಅಧಿಕಾರಿಯನ್ನು ನೇಮಿಸುವಂತೆ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದು, ಇದಕ್ಕೆ ಜಿಲ್ಲಾಧಿಕಾರಿ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಐವನ್ ಡಿಸೋಜಾ ಹೇಳಿದರು.

ತಾ.ಪಂ. ಅಧ್ಯಕ್ಷ ಮುಹಮ್ಮದ್ ಮೋನು, ಜಿ.ಪಂ. ಸದಸ್ಯ ಶಾಹುಲ್ ಹಮೀದ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್, ಮುಖಂಡರಾದ ಅಶೋಕ್, ಸವದ್, ಭಾಸ್ಕರ್ ರಾವ್, ಪ್ರಕಾಶ್ ಸಾಲ್ಯಾನ್, ಅಶಿತ್ ಪಿರೇರಾ, ವಿವೇಕ್‌ರಾಜ್, ಅಪ್ಪಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿಗೆ ಮಂತ್ರಿಸ್ಥಾನ ನೀಡಿ !

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ವಿಚಾರದಲ್ಲಿ ಕೇವಲ ಜಿಲ್ಲಾಧಿಕಾರಿ ಮಾತ್ರವೇ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿ ದ್ದಾರೆ.  ಜಿಲ್ಲಾ ಉಸ್ತುವಾರಿ ಸಚಿವರಾಗಲೂ, ಶಾಸಕರಾಗಲೂ ಯಾರೂ ಗಮನ ಹರಿಸುತ್ತಿಲ್ಲ. ಹೀಗಾದರೆ ಜಿಲ್ಲಾಧಿಕಾರಿಯನ್ನೇ ಮಂತ್ರಿ ಮಾಡಿದರೆ ಒಳ್ಳೆಯದು ಎಂದು ಐವನ್ ಡಿಸೋಜಾ ಹೇಳಿದರು.

ಸ್ಥಳೀಯ ಶಾಸಕರು ಗುದ್ದಲಿಪೂಜೆ, ಟ್ರಾಫಿಕ್ ಮೀಟಿಂಗ್‌ನಲ್ಲಿ ಬಿಸಿಯಾಗಿದ್ದಾರೆ. ಉಸ್ತುವಾರಿ ಸಚಿವರು ಉಡುಪಿಯಿಂದ ಹೊರಗೆ ಬರುತ್ತಿಲ್ಲ, ಇನೆ್ನೂಬ್ಬ ಸಚಿವರು ಎಲ್ಲಿದ್ದಾರೆ ಗೊತ್ತಿಲ್ಲ. ಕಾರ್ಮಿಕರು ಗುಳೆ ಹೋಗಲು ಮುಂದಾಗಿದ್ದು, ಅವರಿಗೆ ಧೈರ್ಯ ಹೇಳಿ ನಿಲ್ಲಿಸುವ ಕೆಲಸ ಮಾಡಬೇಕು. ಈ ಬಗ್ಗೆ ಯಾರೂ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ ಎಂದು ಐವನ್ ಡಿಸೋಜಾ ಆರೋಪಿಸಿದರು.

ಎ. 23ರಂದು ವ್ಯಾಕ್ಸಿನೇಷನ್ ಅಭಿಯಾನ

ಕಾಂಗ್ರೆಸ್ ಹೆಲ್ಪ್‌ಲೈನ್‌ನಿಂದ ಎ.23ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಕದ್ರಿಮಲ್ಲಿಕಟ್ಟೆಯ ಲಯನ್ಸ್ ಸೇವಾ ಸದನದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಈ ಅಭಿಯಾನ ನಡೆಯಲಿದೆ ಎಂದು ಐವನ್ ಡಿಸೋಜಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News