​ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ: ಐವನ್ ಡಿಸೋಜಾ ಆರೋಪ

Update: 2021-04-21 17:20 GMT

ಮಂಗಳೂರು, ಎ.21: ಸಾಂವಿಧಾನಿಕ ಬಿಕ್ಕಟು ತಲೆದೋರಿದಾಗ ಮಾತ್ರ ರಾಜ್ಯಪಾಲರು ಆಡಳಿತದ ವಿಷಯದಲ್ಲಿ ಮಧ್ಯಪ್ರವೇಶ ಮಾಡಲು ಅವಕಾಶ ಇದೆ. ಆದರೆ ರಾಜ್ಯದಲ್ಲಿ ಚುನಾಯಿತ ಸರ್ಕಾರ ಇರುವಾಗ ಸರ್ವಪಕ್ಷದ ಸಭೆಯನ್ನು ನಡೆಸುವ ಮೂಲಕ ರಾಜ್ಯಪಾಲರು ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾಗಿ ವರ್ತಿಸಿದ್ದಾರೆ. ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಆರೋಪಿಸಿದ್ದಾರೆ.

ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಕೂಡಲೇ ರಾಜ್ಯ ಸರ್ಕಾರ ಕರ್ಫ್ಯೂ ಘೋಷಣೆ ಮಾಡಿದೆ. ಮುಖ್ಯಮಂತ್ರಿಗಳು ಜನಪ್ರತಿನಿಧಿಗಳನ್ನು ಕರೆಸಿ ತೀರ್ಮಾನಿಸುವ ಬದಲು ರಾಜ್ಯಪಾಲರೇ ಸರ್ವಪಕ್ಷಗಳ ಸಭೆ ಕರೆದು ನಿರ್ಧರಿಸಿದ್ದಾರೆ. ಕರ್ನಾಟಕದ ಚರಿತ್ರೆಯಲ್ಲೇ ಈ ರೀತಿ ರಾಜ್ಯಪಾಲರು ನಿರ್ಧರಿಸಿದ ಉದಾಹರಣೆ ಇಲ್ಲ ಎಂದು ಅವರು ಹೇಳಿದರು.

ಹಾಗಿದ್ದರೂ ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಜೊತೆ ಸಹಕರಿಸುತ್ತೇವೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು ಎಂಬುದು ನಮ್ಮ ಆಗ್ರಹ ಎಂದವರು ಹೇಳಿದರು.

'ಮನೆಗೆ ಲಸಿಕೆ ನೀಡುವ ಘೋಷಣೆಯ ನಿರೀಕ್ಷೆಯಿತ್ತು'

ಪ್ರಧಾನ ಮಂತ್ರಿಗಳು ಭಾಷಣದಲ್ಲಿ, ಪ್ರತಿ ಮನೆಗೆ ಉಚಿತ ಲಸಿಕೆ ಪೂರೈಸುವ ಬಗ್ಗೆ ಮಾತನಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ. ಆದರೆ ಅವರು ಶೇ.50ರಷ್ಟು ಕೋವಿಡ್ ಲಸಿಕೆಯನ್ನು ಮಾರುಕಟ್ಟೆಗೆ ಪೂರೈಸುವುದಾಗಿ ಹೇಳಿದ್ದಾರೆ. ಹಾಗಾದರೆ, ಇದನ್ನು ಆರು ತಿಂಗಳ ಹಿಂದೆಯೇ ಘೋಷಿಸಬಹುದಿತ್ತಲ್ಲವೇ ಎಂದು ಐವನ್ ಡಿಸೋಜಾ ಪ್ರಶ್ನಿಸಿದರು.

ದೇಶದಲ್ಲಿ ಈಗ ವ್ಯಾಕ್ಸಿನ್ ಕೊರತೆ ಎದುರಾಗಿದ್ದು, ಬೇರೆ ದೇಶಗಳಿಂದ ತರಿಸುತ್ತಿರುವುದಾಗಿ ಪ್ರಧಾನಿ ಹೇಳಿದ್ದಾರೆ. ಈ ಮೊದಲು ದೇಶದ ಜನತೆಗೆ ವ್ಯಾಕ್ಸಿನ್‌ಗೆ ಆದ್ಯತೆ ನೀಡುವ ಬದಲು ವಿದೇಶಗಳಿಗೆ ರಫ್ತು ಮಾಡಲಾಯಿತು. ಈಗ ನಮ್ಮ ದೇಶಕ್ಕೆ ವಿದೇಶ ದಿಂದ ಲಸಿಕೆ ತರಿಸಬೇಕಾದ ದುರ್ಗತಿ ಬಂದಿದೆ ಎಂದರು.

ಇಂದಿರಾ ಕ್ಯಾಂಟಿನ್ ಆರಂಭಿಸಿ

ಇಂದಿರಾ ಕ್ಯಾಂಟಿನ್‌ನಲ್ಲಿ ಪ್ರತಿದಿನ 1.60 ಲಕ್ಷ ಬಡ ಕಾರ್ಮಿಕರು ಕಡಿಮೆ ದರದಲ್ಲಿ ಆಹಾರ ಸೇವಿಸುತ್ತಿದ್ದರು. ಅದನ್ನು ಹಾಲಿ ಸರ್ಕಾರ ಬಂದ್ ಮಾಡಿದೆ. ಈ ಕೋವಿಡ್ ಸಂದರ್ಭ ಇಂದಿರಾ ಕ್ಯಾಂಟಿನ್ ಮೂಲಕ ಕಾರ್ಮಿಕರ ಹೊಟ್ಟೆ ಹಸಿವನ್ನು ನಿವಾರಿಸ ಬೇಕು. ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಕರ್ಫ್ಯೂ ಮುಕ್ತಾಯವರೆಗೆ ಕಾರ್ಮಿಕರಿಗೆ , ಬಿಪಿಎಲ್ ಪಡಿತರ ಚೀಟಿದಾರರಿಗೆ 10 ಕಿಲೋ ಅಕ್ಕಿಯನ್ನು ಉಚಿತವಾಗಿ ನೀಡಬೇಕು. ಜತೆಗೆ ದಿನಸಿ ಸಾಮಗ್ರಿ ಕಿಟ್ ವಿತರಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News