"ತಮ್ಮ ಜೀವ ಪಣಕ್ಕಿಟ್ಟು ಹಲವರನ್ನು ಉಳಿಸಿದರು": ಪರಿಹಾರಕ್ಕಾಗಿ ಕಾಯುತ್ತಿರುವ ಕೊರೋನಕ್ಕೆ ಬಲಿಯಾದ ವೈದ್ಯರ ಕುಟುಂಬ

Update: 2021-04-22 07:49 GMT

ಹೊಸದಿಲ್ಲಿ: ನಿವೃತ್ತಿ ವಯಸ್ಸು ದಾಟಿದ ನಂತರವೂ ಚೆನ್ನೈನ ಕಿಲ್ಪಾಕ್ ಪ್ರದೇಶದಲ್ಲಿ ಡಾ. ಕೆ. ಬಾಲಸುಬ್ರಮಣಿಯನ್ ಅವರು ರೋಗಿಗಳಿಗೆ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಪ್ರತಿ ದಿನ ಅವರ ಮನೆ ಹಾಗೂ ಕ್ಲಿನಿಕ್ಕಿಗೆ ಹಲವಾರು  ರೋಗಿಗಳು ಬರುತ್ತಿದ್ದರು. ಕಳೆದ ವರ್ಷದ ಕೋವಿಡ್ ಸಾಂಕ್ರಾಮಿಕದ ವೇಳೆಯೂ ಈ 70 ವರ್ಷದ ವೈದ್ಯ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಜೂನ್ 2020ರಲ್ಲಿ ಕೋವಿಡ್ ದೃಢಪಟ್ಟು ಅಪೋಲೋ ಆಸ್ಪತ್ರೆಗೆ ದಾಖಲಾದ ಹತ್ತು ದಿನಗಳಲ್ಲಿಯೇ, ಜೂನ್ 11ರಂದು ಅವರು ಕೋವಿಡ್‍ಗೆ ಬಲಿಯಾಗಿದ್ದರು.

ಕರ್ತವ್ಯ ನಿರ್ವಹಿಸುವ ವೇಳೆ ಕೋವಿಡ್ ಸೋಂಕಿಗೆ ತುತ್ತಾಗಿ ಮೃತಪಟ್ಟ ಆರೋಗ್ಯ ಸೇವಾ ಕಾರ್ಯಕರ್ತರ ಕುಟುಂಬಗಳಿಗೆ ರೂ 50 ಲಕ್ಷ ವಿಮಾ ಹಣವನ್ನು ಕೇಂದ್ರ ಸರಕಾರ ತನ್ನ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಅನ್ವಯ ಘೋಷಿಸಿತ್ತು. ತಮಿಳುನಾಡು ಸರಕಾರ ಕೂಡ  ರೂ. 25 ಲಕ್ಷ ಪರಿಹಾರ ನೀಡುವ ಭರವಸೆ ನೀಡಿತ್ತು. ಆದರೆ ಡಾ ಬಾಲಸುಬ್ರಮಣಿಯನ್ ಅವರು ಮೃತಪಟ್ಟು ಹತ್ತು ತಿಂಗಳ ನಂತರವೂ ಅವರ ಪುತ್ರ ಪರಿಹಾರ ಮೊತ್ತ ಪಡೆಯಲು ಅಲೆದಾಡುವಂತಾಗಿದೆ.

ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ಆರಂಭಗೊಂಡಂದಿನಿಂದ ಕರ್ತವ್ಯದ ವೇಳೆ ಮೃತಪಟ್ಟ ವೈದ್ಯರ ಪಟ್ಟಿಯನ್ನು ಐಎಂಎ  ಕೇಂದ್ರ ಸರಕಾರಕ್ಕೆ ಸಲ್ಲಿಸುತ್ತಲೇ ಇದ್ದು ಇಲ್ಲಿಯ ತನಕ ಈ ಪಟ್ಟಿಯಲ್ಲಿ 756 ವೈದ್ಯರ ಹೆಸರುಗಳಿವೆ. ಆದರೆ ಇಲ್ಲಿಯ ತನಕ ಕೇವಲ 168 ಮೃತ ವೈದ್ಯರ ಕುಟುಂಬಗಳಿಗೆ  ಪರಿಹಾರ ಹಣ ದೊರಕಿದೆ ಉಳಿದ 600ರಷ್ಟು ಮಂದಿಗೆ ಅರ್ಧದಷ್ಟೂ ಪರಿಹಾರ ಹಣ ದೊರಕಿಲ್ಲ ಎಂದು ಐಎಂಎ ಆರೋಪಿಸಿದೆ.

ಡಾ ಬಾಲಸುಬ್ರಮಣಿಯನ್ ಅವರ ಬಳಿಗೆ ಬಂದಿದ್ದ ರೋಗಿಯೊಬ್ಬನಿಗೆ ನಂತರ ಕೋವಿಡ್ ದೃಢಪಟ್ಟು ಆತ ಮೃತಪಟ್ಟಿದ್ದು ಆತನ ಸಂಪರ್ಕದಿಂದಲೇ ವೈದ್ಯರಿಗೆ ಕೋವಿಡ್ ಸೋಂಕು ತಗಲಿತ್ತು ಎಂದು ಅವರ ಪುತ್ರ ಹೇಳುತ್ತಾರೆ. ಎಲ್ಲಾ ಅಗತ್ಯ ದಾಖಲೆಗಳನ್ನು ಸಂಬಂಧಿತ ಪ್ರಾಧಿಕಾರಗಳಿಗೆ ಸಲ್ಲಿಸಿದ್ದರೂ ಪರಿಹಾರ ಮಾತ್ರ ದೊರಕಿಲ್ಲ.

ಡಾ ಬಾಲಸುಬ್ರಮಣಿಯನ್ ಅವರಂತೆಯೇ ಡಾ ಶ್ಯಾಮ್ ಸುಂದರ್ ಅವರೂ ಕರ್ತವ್ಯ ನಿರ್ವಹಿಸುವ ವೇಳೆ ಕೋವಿಡ್ ಸೋಂಕಿಗೆ ತುತ್ತಾಗಿ ನಂತರ ಜುಲೈ 29,2020ರಂದು ಮೃತಪಟ್ಟಿದ್ದರು. ಅವರ ಪತ್ನಿ ಡಾ ವಾಣಿ ಅವರು ಪರಿಹಾರಕ್ಕಾಗಿ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದರೂ ಪರಿಹಾರ ದೊರಕಿಲ್ಲ. ಚೆನ್ನೈನ ಖಾಸಗಿ ಕ್ಲಿನಿಕ್ ಒಂದರಲ್ಲಿ ಡಾ ವಾಣಿ ಹಿರಿಯ ಸ್ತ್ರೀರೋಗ ತಜ್ಞೆಯಾಗಿದ್ದಾರೆ.

ಡಾ ಶ್ಯಾಮ್ ಸುಂದರ್ (68) ಅವರು ಖಾಸಗಿ ಕ್ಲಿನಿಕ್ ಒಂದರಲ್ಲಿ  ಇಎನ್‍ಟಿ ತಜ್ಞರಾಗಿದ್ದರು.  ರೋಗಿಯೊಬ್ಬನಿಗೆ ಕೋವಿಡ್ ಸೋಂಕು ತಗಲಿದೆ ಎಂದು ತಿಳಿದಿದ್ದರೂ ಆತನ ಗಂಟಲಿನಲ್ಲಿರುವ ಗಡ್ಡೆ ಕ್ಯಾನ್ಸರ್ ಗಡ್ಡೆಯೇ ಎಂದು ತಿಳಿಯಲು ಪಿಪಿಇ ಕಿಟ್ ಧರಿಸಿ ಪರಿಶೀಲಿಸಿದ್ದರು.

 ಆದರೆ ನಂತರದ ಕೆಲ ದಿನಗಳಲ್ಲಿ ಕೋವಿಡ್  ಸೋಂಕು ಡಾ ಶ್ಯಾಮ್ ಸುಂದರ್ ಅವರಿಗೆ ದೃಢಪಟ್ಟಿತ್ತು ಹಾಗೂ 20 ದಿನಗಳ ನಂತರ ಅವರು ದಿಢೀರ್ ಹೃದಯ ಸ್ಥಂಭನದಿಂದ ಮೃತಪಟ್ಟಿದ್ದರು.

ಈಗ ದೇಶದಲ್ಲಿ ಎರಡನೇ ಕೋವಿಡ್ ಅಲೆ ತಾಂಡವವಾಡುತ್ತಿರುವ ನಡುವೆ ಕಳೆದ ವರ್ಷ ಘೋಷಿಸಿದ್ದ ವಿಮಾ ಪರಿಹಾರ ಪ್ಯಾಕೇಜ್ ಅನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರ ಹೊಸ ಯೋಜನೆ ಜಾರಿಗೊಳಿಸುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News