ಭಾಗ್‌ ಕೊರೋನ ಭಾಗ್: ಟಾರ್ಚ್‌ ಹಿಡಿದುಕೊಂಡು ʼಕೊರೋನʼ ಓಡಿಸಿದ ಮಧ್ಯಪ್ರದೇಶದ ಗ್ರಾಮಸ್ಥರು

Update: 2021-04-22 09:43 GMT

ಭೋಪಾಲ್: ಮಧ್ಯ ಪ್ರದೇಶದ ಅಗರ್ ಮಾಲ್ವ ಜಿಲ್ಲೆಯ ಗಣೇಶಪುರ ಎಂಬ ಗ್ರಾಮದಲ್ಲಿ ರವಿವಾರ ರಾತ್ರಿ ಗ್ರಾಮಸ್ಥರು ದೀವಟಿಗೆಗಳನ್ನು ಕೈಗಳಲ್ಲಿ ಹಿಡಿದುಕೊಂಡು `ಭಾಗ್  ಕೊರೋನಾ ಭಾಗ್' ಎಂಬ ಘೋಷಣೆಗಳನ್ನು ಕೂಗುತ್ತಾ ಓಡಿ ದೇಶವನ್ನೇ ತತ್ತರಗೊಳಿಸುವ ಕೋವಿಡ್-19 ಅನ್ನು ಹೊಡೆದೋಡಿಸುವ ಯತ್ನ ನಡೆಸಿದ್ದಾರೆ. ಈ ವಿದ್ಯಮಾನದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗ್ರಾಮಸ್ಥರು ದೀವಟಿಗೆಗಳನ್ನು ಹಿಡಿದು ಓಡುತ್ತಾ ಕೊನೆಗೆ ಗ್ರಾಮದ ಹೊರವಲಯದಲ್ಲಿ ದೀವಟಿಗೆಗಳನ್ನು ಎಸೆಯುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಈ ರೀತಿ ಮಾಡಿದಾಗ ಗ್ರಾಮದಿಂದ ಕೊರೋನಾ ಸೋಂಕನ್ನು ಹೊಡೆದೋಡಿಸಬಹುದು ಎಂದು ಗ್ರಾಮಸ್ಥರು ನಂಬಿದ್ದಾರೆ. ಪ್ರತಿ ಬಾರಿ ಸಾಂಕ್ರಾಮಿಕ ಕಾಡಿದಾಗ ಪ್ರತಿ ಕುಟುಂಬದ ಒಬ್ಬ ವ್ಯಕ್ತಿ ಈ ರೀತಿ ದೀವಟಿಗೆಗಳನ್ನು ಹಿಡಿದು  ಓಡಿ ನಂತರ ಅವುಗಳನ್ನು ಗ್ರಾಮದ ಹೊರಗೆ ಎಸೆದಲ್ಲಿ ಗ್ರಾಮವನ್ನು ಬಚಾವ್ ಮಾಡಬಹುದೆಂದು ಹಿರಿಯರು ಹೇಳಿದ್ದಾರೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಪ್ರತಿ ದಿನ ಒಬ್ಬರು ಸಾಯುತ್ತಿದ್ದರು ಹಾಗೂ ಹಲವು ಮಂದಿ ಜ್ವರದಿಂದ ಬಳಲುತ್ತಿದ್ದರು ಆದರೆ ರವಿವಾರ ರಾತ್ರಿಯ ಆಚರಣೆಯ ನಂತರ ಯಾರಿಗೂ ಅನಾರೋಗ್ಯವುಂಟಾಗಿಲ್ಲ ಎಂದು ಗ್ರಾಮದ ಕೆಲ ಮಂದಿ ಹೇಳುತ್ತಿದ್ದಾರೆ.

ಕಳೆದ ವರ್ಷ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಚೀನೀ ಕಾನ್ಸುಲ್ ಜನರಲ್  ಹಾಗೂ ಬೌದ್ಧ ಭಿಕ್ಷುಗಳು ಮುಂಬೈಯಲ್ಲಿನ ಪ್ರಾರ್ಥನಾ ಸಭೆಯೊಂದರಲ್ಲಿ  ಗೋ ಕೊರೋನಾ ಗೋ ಎಂಬ ಘೋಷಣೆ ಕೂಗಿದ್ದು ವೈರಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News