ಮಂಗಳೂರು : ಮತ್ತೆ ಸ್ತಬ್ಧವಾದ ಸಿನೆಮಾ ಮಂದಿರ, ಮಾಲ್‌ಗಳು

Update: 2021-04-22 12:58 GMT

ಮಂಗಳೂರು, ಎ.22: ಕೊರೋನ ಎರಡನೆ ಅಲೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದಂತೆ ದ.ಕ. ಜಿಲ್ಲೆಯಲ್ಲೂ ಸಿನೆಮಾ ಮಂದಿರ, ಮಾಲ್‌ಗಳು ಸ್ತಬ್ಧಗೊಂಡಿವೆ. ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಸುಮಾರು ಎರಡು ತಿಂಗಳಿಗೂ ಅಧಿಕ ಕಾಲ ಸ್ತಬ್ದಗೊಂಡು ಕಳೆದ ಕೆಲ ತಿಂಗಳಿನಿಂದೀಚೆಗೆ ಆರ್ಥಿಕ ಚಟುವಟಿಕೆಯಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡು ಬರುತ್ತಿದ್ದ ಸಮಯದಲ್ಲೇ ಮತ್ತೆ ಕೋವಿಡ್ ಎರಡನೆ ಅಲೆ ಆರ್ಥಿಕತೆಯ ಮೇಲೆ ಬರೆ ಎಳೆಯಲಾರಂಭಿಸಿದೆ.

ಕೊರೋನ ಎರಡನೆ ಅಲೆಯ ಆತಂಕದ ಜತೆಯಲ್ಲಿಯೇ ಸರಕಾರದ ಆದೇಶದ ಮಾರ್ಗಸೂಚಿಗಳು ಜನಸಾಮಾನ್ಯರನ್ನು ಆತಂಕ ಹಾಗೂ ಗೊಂದಲಕ್ಕೀಡು ಮಾಡಿವೆ.

ರಾಜ್ಯ ಸರಕಾರದ ಪರಿಷ್ಕೃತ ಆದೇಶದಂತೆ ಅಗತ್ಯ ಹಾಗೂ ತುರ್ತು ಸೇವೆಗಳಿಗೆ ಮಾತ್ರವೇ ಅವಕಾಶ ಕಲ್ಪಿಸಿರುವುದರಿಂದ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಇಂದು ಕೆಲವೆಡೆ ಆದೇಶದಲ್ಲಿ ನಿರ್ಬಂಧಿಸಲಾದ ಅಂಗಡಿ ಮುಂಗಟ್ಟುಗಳು ತೆರೆದಿದ್ದುದನ್ನು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸರ ಉಪಸ್ಥಿತಿಯಲ್ಲಿ ಮುಚ್ಚಿಸಿದ ಘಟನೆಯೂ ನಡೆಯಿತು.

ಬಟ್ಟೆಬರೆ, ಮೊಬೈಲ್ ಶಾಪ್‌ಗಳು, ಗಡಿಯಾರ ಮೊದಲಾದ ಅಂಗಡಿಗಳನ್ನು ಮನಪಾ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿಕೊಂಡು ಮುಚ್ಚುವಂತೆ ಸೂಚಿಸಿದರು. ಈ ನಡುವೆ ಅಂಗಡಿಗಳ ಮಾಲಕರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಸರಕಾರದ ಪರಿಷ್ಕೃತ ಆದೇಶದಂತೆ ಪಡಿತರ ಅಂಗಡಿಗಳು, ತರಕಾರಿ, ಡೈರಿ ಸೇರಿದಂತೆ ದಿನಬಳಕೆಯ ಸಾಮಗ್ರಿಗಳ ಅಂಗಡಿ ಮುಂಗಟ್ಟುಗಳಿಗೆ ಅವಕಾಶವಿದ್ದು, ಉಳಿದಂತೆ ಇತರ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಹೇಳಲಾಗಿದೆ.
ಮಂಗಳೂರು ನಗರದ ಪ್ರಮುಖ ಮಾಲ್‌ಗಳಾದ ಫೋರಂ ಫಿಝಾ ಮಾಲ್ ಹಾಗೂ ಸಿಟಿ ಸೆಂಟರ್ ಮಾಲ್ (ಸ್ಪಾರ್ ಹೊರತುಪಡಿಸಿ)ಗಳು ಸ್ತಬ್ಧವಾಗಿವೆ. ಸರಕಾರದ ಆದೇಶದ ಪ್ರಕಾರ ರೆಸ್ಟೋರೆಂಟ್‌ಗಳು ಕೂಡಾ ಗ್ರಾಹಕರ ಪ್ರವೇಶವನ್ನು ನಿರ್ಬಂಧಿಸಿದ್ದು, ಬಾಗಿಲ ಹೊರಗಡೆ ‘ಪಾರ್ಸೆಲ್ ಹಾಗೂ ಹೋಂ ಡೆಲಿವರಿಗೆ ನಮ್ಮ ಸೇವೆ ಇದೆ’ ಎಂಬ ಫಲಕವನ್ನು ಅಳವಡಿಸಿವೆ.

ಪರಿಷ್ಕೃತ ಆದೇಶದಲ್ಲಿ ಏನಿದೆ ?

ಪಡಿತರ ಅಂಗಡಿಗಳು, ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳ, ಡೈರಿ, ಹಾಲಿನ ಬೂತ್‌ಗಳು, ಮಾಂಸ ಮತ್ತು ಮೀನು, ಪ್ರಾಣಿಗಳ ಮೇವುಗಳನ್ನು ಮಾರಾಟ ಮಾಡುವ ಅಂಗಡಿಗಳು ವ್ಯಾಪಾರ ನಡೆಸಲು ಅನುಮತಿಸಲಾಗಿದೆ.

ಸಗಟು ತರಕಾರಿ, ಹಣ್ಣು, ಹೂವಿನ ಮಾರುಕಟ್ಟೆಗಳು ಕೋವಿಡ್ ನಡವಳಿಕೆಯನ್ನು ಅನುಸರಿಸಿಕೊಂಡು ತೆರೆದ ಸ್ಥಳ, ಆಟದ ಮೈದಾನಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಈ ವರ್ಗಾವಣೆ ಪ್ರಕ್ರಿಯೆಯನ್ನು ಎಪ್ರಿಲ್ 23ರೊಳಗೆ ಪೂರ್ಣಗೊಳಿಸಬೇಕು.

ಲಾಡ್ಜಿಂಗ್ ಹೊಟೇಲ್‌ಗಳು ಅಲ್ಲಿ ಈಗಾಗಲೇ ಇರುವ ಅತಿಥಿಗಳಿಗೆ ಮಾತ್ರ ಸೇವೆಯನ್ನು ನೀಡಲು ಅನುಮತಿಸಲಾಗಿದೆ. ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳು/ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರವೇ ಅವಕಾಶ.

*ಎಲ್ಲಾ ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಕೈಗಾರಿಕೆಗಳಿಗೆ ನಿರ್ವಹಣೆಗೆ ಅವಕಾಶ. ಬ್ಯಾಂಕ್‌ಗಳು, ವಿಮಾ ಕಚೇರಿಗಳು ಮತ್ತು ಎಟಿಎಂಗಳು ಕಾರ್ಯನಿರ್ವಹಿಸಲಿವೆ. ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಕ್ಕೆ ಅವಕಾಶ.
*ಇ- ಕಾಮರ್ಸ್ ಮೂಲಕ ಎಲ್ಲಾ ವಸ್ತುಗಳನ್ನು ತಲುಪಿಸಲು ಅನುಮತಿಸಲಾಗಿದೆ. ಶೀತಲ ಸಂಗ್ರಹಣೆ ಮತ್ತು ವೇರ್ ಹೌಸಿಂಗ್ ಸೇವೆಗಳಿಗೆ ಅನುನತಿ, ಖಾಸಗಿ ಭದ್ರತಾ ಸೇವೆಗಳಿಗೆ ಅನುಮತಿ.

*ಕ್ಷೌರ ಅಂಗಡಿಗಳು, ಸೆಲೂನ್ ಬ್ಯೂಟಿ ಪಾರ್ಲರ್‌ಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಕೋವಿಡ್ ಸಮುಚಿತ ನಡವಳಿ ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ನಿರ್ವಹಿಸಲು ಅನುಮತಿಸಲಾಗಿದೆ.
*ನಿರ್ಮಾಣ ಕಾಮಗಾರಿಗಳು/ ಚಟುವಟಿಕೆಗಳಿಗೆ ಸಂಬಂಧಪಟ್ಟ ಸರಕುಗಳನ್ನು ಮಾರಾಟ ಮಾಡುವ ಎಲ್ಲಾ ಅಂಗಡಿ ಸಂಸ್ಥೆಗಳು ಕಾರ್ಯ ನಿರ್ವಹಿಸುವುದನ್ನು ಅನುಮತಿಸಲಾಗಿದೆ.
* ಮೇಲೆ ತಿಳಿಸಿದ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳು/ವಾಣಿಜ್ಯ/ ಖಾಸಗಿ ಸಂಸ್ಥೆಗಳ ಕಾರ್ಯ ನಿರ್ವಹಣೆಯನ್ನು ನಿರ್ಬಂಧಿಸಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News