​ಉಡುಪಿ: ಅಂಗಡಿಗಳನ್ನು ಮುಚ್ಚಿಸಿದ ನಗರಸಭೆ ಅಧಿಕಾರಿಗಳು

Update: 2021-04-22 12:16 GMT

ಉಡುಪಿ, ಎ.22: ಕೊರೋನ ನಿಯಂತ್ರಣಕ್ಕಾಗಿ ಸರಕಾರ ರಾಜ್ಯಾದ್ಯಂತ ಮೇ 4ರವರೆಗೆ ನಿಷೇಧಾಜ್ಞೆ ಹೇರಿರುವ ಹಿನ್ನೆಲೆಯಲ್ಲಿ ಇಂದು ಅಪರಾಹ್ನದ ಬಳಿಕ ನಗರದೊಳಗೆ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಅಂಗಡಿ-ಮುಂಗಟ್ಟುಗಳನ್ನು ನಗರಸಭೆಯ ಅಧಿಕಾರಿಗಳು ಮುಚ್ಚಿಸಿದರು.

ಅಂಗಡಿಗಳನ್ನು ಮುಚ್ಚುವಂತೆ ಮೈಕ್ ಮೂಲಕ ತಿಳಿಸಿದ ಅಧಿಕಾರಿಗಳು, ಮುಚ್ಚುವ ಲಕ್ಷಣ ಕಾಣಿಸದ ಅಂಗಡಿಗಳಿಗೆ ತೆರಳಿ ಅರ್ಧಗಂಟೆಯೊಳಗೆ ಅಂಗಡಿಯನ್ನು ಮುಚ್ಚುವಂತೆ ತಿಳಿಸಿದರಲ್ಲದೇ, ಇಲ್ಲದೇ ಹೋದರೆ ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದರು.

ಕೇವಲ ಆಹಾರ ಸಾಮಗ್ರಿಗಳ ಅಂಗಡಿಗಳು, ಕಟ್ಟಡ ನಿರ್ಮಾಣದ ವಸ್ತುಗಳನ್ನು ಮಾರುವ ಅಂಗಡಿಗಳನ್ನು ಮಾತ್ರ ತೆರೆದಿಡಲು ಅನುಮತಿ ನೀಡಿದರಲ್ಲದೇ, ಎಲೆಕ್ಟ್ರಾನಿಕ್ಸ್, ಬಟ್ಟೆ, ಟಯರ್, ಫ್ಯಾನ್ಸಿ ಸ್ಟೋರ್, ಜ್ಯುವೆಲ್ಲರಿ ಶಾಪ್, ಟೆಕ್ಸ್‌ಟೈಲ್ ಸೇರಿದಂತೆ ಪ್ರತಿಯೊಂದು ಅಂಗಡಿಗಳನ್ನು ಮುಚ್ಚುವಂತೆ ಪ್ರಕಟಿಸುತ್ತಾ ಹೋದರು.

ಈ ವಿಷಯದಲ್ಲಿ ಅವರು ಯಾರಿಗೂ ರಿಯಾಯಿತಿಗಳನ್ನು ನೀಡಲಿಲ್ಲ. ಹೊಟೇಲ್, ಬೇಕರಿಗಳಲ್ಲೂ ತಿಂಡಿಗಳನ್ನು ಅಲ್ಲಿ ತಿನ್ನಲು ಅವಕಾಶ ನೀಡದೇ, ಕೇವಲ ಪಾರ್ಸೆಲ್‌ಗಳನ್ನು ಮಾತ್ರ ನೀಡುವಂತೆ ತಾಕೀತು ಮಾಡಿದರು. ಅಲ್ಲೂ ಜನರು ಸೇರದಂತೆ ಜಾಗೃತೆ ವಹಿಸುವಂತೆ ಅವರು ತಿಳಿಸಿದರು.

ಮಾಲ್‌ಗಳನ್ನು ತೆರೆಯಲು ಅವಕಾಶವೇ ಇಲ್ಲ ಎಂದ ಅವರು, ಮೇ 4ರವರೆಗೆ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಉಳಿದ ಯಾರಿಗೂ ಅಂಗಡಿ ತೆರೆಯಲು ಅವಕಾಶವಿಲ್ಲ. ತೆರೆದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.

ಒಂದು ರೀತಿಯಲ್ಲಿ ಇದು ಲಾಕ್‌ಡೌನ್ ಹೇರಿದಂತೆ ಆಗಿದೆ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮಾತ್ರ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ಉಳಿದವರು ಹೊಟ್ಟೆಗೆ ಏನು ತಿನ್ನಬೇಕು ಎಂದು ಅಧಿಕಾರಿಗಳ ಪ್ರಕಟಣೆಯನ್ನು ಕೇಳುತಿದ್ದ ಸಾರ್ವಜನಿಕರು ಪರಸ್ಪರ ಮಾತನಾಡಿಕೊಳ್ಳುತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News