ರೈಲ್ವೆ ಸಚಿವರು ನೀಡಿದ್ದ ಬಹುಮಾನದ ಅರ್ಧ ಹಣವನ್ನು ತಾನು ರಕ್ಷಿಸಿದ ಮಗುವಿನ ಶಿಕ್ಷಣಕ್ಕೆ ಮೀಸಲಿಟ್ಟ ಸಾಹಸಿ ಯುವಕ

Update: 2021-04-22 13:52 GMT

ಹೊಸದಿಲ್ಲಿ: ಮಗುವೊಂದು ರೈಲ್ವೆ ಹಳಿಯಲ್ಲಿ ಬಾಕಿಯಾಗಿರುವುದನ್ನು ಗಮನಿಸಿ ರೈಲು ಬರುತ್ತಿದ್ದಂತೆಯೇ ತನ್ನ ಪ್ರಾಣವನ್ನೂ ಲೆಕ್ಕಿಸದೇ ಪುಟ್ಟ ಮಗುವನ್ನು ಕೂದಲೆಳೆಯ ಅಂತರದಲ್ಲಿ ಬಚಾವ್‌ ಮಾಡಿದ್ದ ಯುವಕನ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಘಿತ್ತು. ಮುಂಬೈ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮಗುವನ್ನು ಪಾರು ಮಾಡಿದ ರೈಲ್ವೆ ಉದ್ಯೋಗಿ ಮಯೂರ್‌ ಶಿಲ್ಕೆಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ನಗದು ಬಹುಮಾನ ನೀಡಿದ್ದರು. ಇದೀಗ ಆ ನಗದು ಬಹುಮಾನದ ಅರ್ಧ ಹಣವನ್ನು ತಾನು ರಕ್ಷಿಸಿದ ಮಗುವಿನ ಕುಟುಂಬಕ್ಕೆ ನೀಡುತ್ತಿದ್ದೇನೆಂದು ಮಯೂರ್ ಘೋಷಿಸಿದ್ದಾರೆ.

"ಆ ಮಗುವಿನ ಕುಟುಂಬವು ಆರ್ಥಿಕವಾಗಿ ಸಬಲರಾಗಿಲ್ಲ ಎಂದು ನನಗೆ ತಿಳಿದು ಬಂದಿದೆ. ಹಾಗಾಹಗಿ ಮಗುವಿನ ಅಭಿವೃದ್ಧಿ ಮತ್ತು ಶಿಕ್ಷಣಕ್ಕಾಗಿ ನನಗೆ ನೀಡಲಾದ ಹಣದ ಅರ್ಧ ಮೊತ್ತವನ್ನು ನೀಡುತ್ತಿದ್ದೇನೆ" ಎಂದು ಶೆಲ್ಕೆ ANI ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅಂಧ ಮಹಿಳೆಯೋರ್ವರು ಮಗುವನ್ನು ಪ್ಲಾಟ್‌ ಫಾರ್ಮ್‌ ನಲ್ಲಿ ಕರೆದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

"ಇದು ಕೋವಿಡ್‌ 19ನ ಸಂಕಷ್ಟದ ಸಂದರ್ಭವಾಗಿದೆ. ಯಾರೆಲ್ಲ ಹಣ ನೀಡಬೇಕೆಂದಿದ್ದೀರೋ, ಅವರೆಲ್ಲಾ ಆ ತಾಯಿ ಮತ್ತು ಮಗುವಿಗೆ ಹಣ ನೀಡಿ. ಅಥವಾ ಇನ್ನಿತರ ಸಂಕಷ್ಟದಲ್ಲಿರುವವರಿಗೆ ನೆರವಾಗಿ" ಎಂದು ಸಾಮಾಜಿಕ ತಾಣದಲ್ಲಿ ಮಯೂರ್‌ ಶೆಲ್ಕೆ ಮನವಿ ಮಾಡಿಕೊಂಡಿದ್ದಾರೆ. ಮಗುವಿನ ಶಿಕ್ಷಣಕ್ಕೆ ಹಣ ನೀಡಿದ ಬಳಿಕ ಇದೀಗ ಮಯೂರ್‌ ಶೆಲ್ಕೆ ಹೆಸರು ಮತ್ತೊಮ್ಮೆ ಸಾಮಾಜಿಕ ತಾಣದಾದ್ಯಂತ ಹರಿದಾಡಿದ್ದು, ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News