ಉಡುಪಿ: ದೇವಳಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ

Update: 2021-04-22 14:22 GMT

ಉಡುಪಿ, ಎ.22: ರಾಜ್ಯದಲ್ಲಿ ಕೊರೋನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಆದೇಶದಂತೆ ಜಿಲ್ಲೆಯಲ್ಲಿ ವಿವಿಧ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದ್ದು, ಇದರಂತೆ ಜಿಲ್ಲೆಯಲ್ಲಿರುವ ಎಲ್ಲಾ ಧಾರ್ಮಿಕ ಸ್ಥಳಗಳು /ಪೂಜಾ ಸ್ಥಳಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹಾಕಲಾಗಿದೆ. ಪೂಜಾ ಸ್ಥಳದ ಸೇವೆಯಲ್ಲಿ ತೊಡಗಿರುವ ಎಲ್ಲಾ ಸಿಬ್ಬಂದಿಗಳು ಯಾವುದೇ ಸಂದರ್ಶಕರನ್ನು ಒಳಗೊಳ್ಳದೆ ತಮ್ಮ ಆಚರಣೆಗಳನ್ನು ಮತ್ತು ಕರ್ತವ್ಯಗಳನ್ನು ನಿರ್ವಹಿಸಬಹುದು.

ದೇವಳಕ್ಕೆ ಆಗಮಿಸುವ ಭಕ್ತರ ಹಿತಾದೃಷ್ಟಿಯಿಂದ ದೇವಾಲಯಗಳಲ್ಲೂ ಸೂಚನಾ ಲಕಗಳನ್ನು ಹಾಕಲಾಗಿದೆ. ಮೇ 4ರವರೆಗೆ ಸಾರ್ವಜನಿಕ ದರ್ಶನವಿಲ್ಲ ಎನ್ನುವ ಮಾಹಿತಿ ರವಾನೆಯಾಗಿದೆ. ಕ್ಷೇತ್ರದ ಸಂಪ್ರಾದಾಯದಂತೆ ದಿನ ನಿತ್ಯದ ಪೂಜಾ ವಿಧಾನಗಳು ದೇವಳದ ಪ್ರಕಾರದ ಒಳಗೆ ನಡೆಯಲಿದೆ. ಆದರೆ ಭಕ್ತರಿಗೆ ಹಿಂದಿನಂತೆ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ. ಇದು ಎ. 21ರ ರಾತ್ರಿ 9ರಿಂದ ಮೇ 4ರ ಬೆಳಗ್ಗೆ 8 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

ಇದರ ಜೊತೆಗೆ ಕೋಲ, ದೈವರಾಧನೆ, ಯಕ್ಷಗಾನ, ನಾಟಕದಂತಹ ಕಲಾ ಪ್ರಕಾರ ಪ್ರದರ್ಶನಕ್ಕೂ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ ಸರಕಾರದ ಮಾರ್ಗಸೂಚಿಯನ್ನು ಕಟ್ಟುನಿಟಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಕಡ್ಡಾಯವಾಗಿ ಪಾರ್ಸೆಲ್‌ಗೆ ಮಾತ್ರ ಅವಕಾಶವಿದೆ. ಈ ಹಿಂದೆ ನಿಗದಿಯಾಗಿದ್ದ ಮದುವೆಗಳಿಗೆ ಹೊಸ ಮಾರ್ಗಸೂಚಿಯನ್ನು ಪಾಲಿಸಿ ಅವಕಾಶ ನೀಡಲಾಗುವುದು. 50 ಜನರಿಗೆ ಮಾತ್ರ ಅವಕಾಶವಿದೆ. ಮದುವೆಯ ನಂತರ ರಿಸೆಪ್ಶನ್ ರೀತಿಯ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಎಲ್ಲಾ ವಸತಿ ನಿಲಯಗಳ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲು ಇಲಾಖೆ ಆಯುಕ್ತರು ಸೂಚಿಸಿದ್ದಾರೆ. ಅದರಂತೆ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಎಲ್ಲಾ ಹಾಸ್ಟೆಲ್‌ಗಳನ್ನು ಬಂದ್ ಮಾಡಿ ವಿದ್ಯಾರ್ಥಿಗಳನ್ನು ಗುರುವಾರ ಬೆಳಗ್ಗೆ ಪಾಲಕರೊಂದಿಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಳು ತಿಳಿಸಿದ್ದಾರೆ.

ನಿಷೇಧಾಜ್ಞೆ ಜಾರಿ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎ.21ರಿಂದ ಮೇ 4 ರವರೆಗೆ ಕೊರೋನಾ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವ ಅವಧಿಯನ್ನು ಹೊರತು ಪಡಿಸಿ ಉಳಿದ ಸಮಯದಲ್ಲಿ ಜಿಲ್ಲೆಯಾದ್ಯಂತ ಆರ್‌ಪಿಸಿ ಸೆಕ್ಷನ್ 144 (3)ರ ಅನ್ವಯ ಸಾರ್ವಜನಿಕ ಹಿತದೃಷ್ಟಿಯಿಂದ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ.

ಶಾಲೆಗಳು, ಕಾಲೇಜುಗಳು, ಶೈಕ್ಷಣಿಕ/ತರಬೇತಿ/ತರಬೇತಿ ಸಂಸ್ಥೆಗಳು ಇತ್ಯಾದಿಗಳು ಮುಚ್ಚಲ್ಪಡುತ್ತವೆ. ಆನ್‌ಲೈನ್/ದೂರಶಿಕ್ಷಣಕ್ಕೆ ಅನುಮತಿ ಮುಂದುವರಿಯಲಿದೆ. ಎಲ್ಲಾ ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್‌ಗಳು, ಜಿಮ್‌ಗಳು, ಯೋಗ ಕೇಂದ್ರಗಳು, ಸ್ಪಾಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಾ, ಈಜುಕೊಳಗಳು, ಮನರಂಜನೆ/ಮನೋರಂಜನಾ ಉದ್ಯಾನ ಗಳು, ಚಿತ್ರಮಂದಿರಗಳು, ಬಾರ್‌ಗಳು ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್‌ಗಳು ಮತ್ತು ಕ್ಲಬ್‌ಗಳನ್ನು ಕಡ್ಡಾಯವಾಗಿ ಮುಚ್ಚಲ್ಪಡುತ್ತವೆ.

ಭಾರತೀಯ ಈಜು ಫೆಡರೇಷನ್‌ನಿಂದ ಅಂಗೀಕೃತವಾದ ಈಜು ಕೊಳದಲ್ಲಿ ಕ್ರೀಡಾ ಪಟುಗಳಿಗೆ ತರಬೇತಿ ಉದ್ದೇಶಕ್ಕಾಗಿ ಮಾತ್ರ ಅವಕಾಶವಿದೆ. ಸಾಮಾಜಿಕ/ರಾಜಕೀಯ/ಕ್ರೀಡೆ/ಮನರಂಜನೆ/ಶೈಕ್ಷಣಿಕ/ ಸಾಂಸ್ಕೃತಿಕ / ಧಾರ್ಮಿಕ ಸಭೆ / ಇತರ ಸಭೆಗಳು ಮತ್ತು ದೊಡ್ಡ ಪ್ರಮಾಣದ ಒಟ್ಟುಗೂಡುವಿಕೆಯನ್ನು ನಿಷೇಧಿಸಲಾಗಿದೆ. ಹೊಟೇಲ್, ರೆಸ್ಟೋರೆಂಟ್ ಮತ್ತು ಕೆಫೆಗಳಲ್ಲಿ ಸಾರ್ವಜನಿಕರಿಗೆ ಉಪಹಾರಗಳನ್ನು ಸೇವಿಸಲು ಅವಕಾಶ ವಿಲ್ಲ, ಪಾರ್ಸೆಲ್‌ಗಳನ್ನು ಮಾತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ.

ಕಟ್ಟಡ ನಿರ್ಮಾಣ ಚಟುವಟಿಕೆ: ಕಟ್ಟಡ ಸೇರಿದಂತೆ ಎಲ್ಲಾ ನಿರ್ಮಾಣ, ದುರಸ್ಥಿ ಚಟುವ ಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಮುಂಗಾರು ಪೂರ್ವ ತಯಾರಿ ಕಾಮಗಾರಿ ಗಳಿಗೆ ಅವಕಾಶವಿದೆ. ಎಲ್ಲಾ ಕೈಗಾರಿಕೆಗಳು, ಕೈಗಾರಿಕಾ ಸಂಸ್ಥೆಗಳು ಉತ್ಪಾದನಾ ಘಟಕಗಳು ಕೋವಿಡ್-19ರ ಸರಕಾರಿ ಆದೇಶಗಳು ಹಾಗೂ ಮಾರ್ಗಸೂಚಿಗಳನ್ನು ಪಾಲಿಸಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಇದಕ್ಕಾಗಿ ಸಂಬಂಧಿತ ಸಂಸ್ಥೆ ನೀಡುವ ಗುರುತಿನ ಚೀಟಿಗಳನ್ನು, ದೃಢೀಕರಣ ಪತ್ರಗಳನ್ನು ಪಡೆದು ಕೊಳ್ಳಬೇಕು.

ಪಡಿತರ ಅಂಗಡಿಗೆ ಅವಕಾಶ: ಪಡಿತರ ಅಂಗಡಿಗಳು ಸೇರಿದಂತೆ ಆಹಾರ ಮತ್ತು ದಿನಸಿ ಅಂಗಡಿಗಳು, ಹಣ್ಣು ಮತ್ತು ತರಕಾರಿ ಅಂಗಡಿ, ಡೈರಿ ಮತ್ತು ಹಾಲಿನ ಬೂತ್, ಮಾಂಸ ಮತ್ತು ಮೀನು, ಪಶು ಆಹಾರ ಅಂಗಡಿಗಳನ್ನು ತೆರೆಯಲು ಅವಕಾಶವಿದೆ. ಸ್ವತಂತ್ರ ಮದ್ಯದಂಗಡಿ ಮತ್ತು ಮಳಿಗೆಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗಳನ್ನು ಮಾತ್ರ ನೀಡಲು ಅವಕಾಶ ನೀಡಲಾಗಿದೆ.

ಬ್ಯಾಂಕುಗಳು, ವಿಮಾ ಕಚೇರಿಗಳು ಮತ್ತು ಎಟಿಎಂಗೆ ಅನುಮತಿ ನೀಡಲಾಗಿದೆ. ಮುದ್ರಣ ಮತ್ತು ಎಲೆಕ್ಟ್ರಾನಿಕ್ಸ್ ಮಾಧ್ಯಮಕ್ಕೆ ಅವಕಾಶವಿದೆ. ಇ-ಕಾಮರ್ಸ್, ಕೋಲ್ಡ್ ಸ್ಟೋರೇಜ್, ಗೋಮಮಿನ ಸೇವೆಗೆ ಅವಕಾಶವಿದ್ದು, ಖಾಸಗಿ ಭದ್ರತಾ ಸೇವೆಗೆ ಅನುಮತಿ ನೀಡಲಾಗಿದೆ.

ಕ್ಷೌರ ಅಂಗಡಿ, ಸೆಲೂನ್, ಬ್ಯೂಟಿ ಪಾರ್ಲರ್‌ಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಆದೇಶ ಹಾಗೂ ಮಾರ್ಗಸೂಚಿಗಳನ್ನು ಅನುಸರಿಸಿ ಕಾರ್ಯನಿರ್ವಹಿಸಲು ಅನುಮತಿ ಇದೆ.

ಈ ಎಲ್ಲಾ ಆದೇಶಗಳನ್ನು ಪಾಲಿಸದೇ ಇದ್ದವರ ಮೇಲೆ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಂಡು ನಿಯಮಾನುಸಾರ ಕಠಿಣ ಕ್ರಮಕೈಗೊಳ್ಳಲಾಗುವುದು. ಈ ಆದೇಶವು ಸರಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News