ಉಡುಪಿ: ಮದ್ಯದಂಗಡಿಗೆ ಮುಗಿಬಿದ್ದ ಮದ್ಯಪ್ರಿಯರು

Update: 2021-04-22 14:32 GMT

ಉಡುಪಿ, ಎ.22: ಕೋವಿಡ್-19 ನಿಯಂತ್ರಣಕ್ಕಾಗಿ ಸರಕಾರ ರಾಜ್ಯಾದ್ಯಂತ ಹೇರಿರುವ ನಿರ್ಬಂಧಗಳು ಲಾಕ್‌ಡೌನ್ ಮಾದರಿ ಯಲ್ಲಿರುವುದರಿಂದ ಆತಂಕಿತರಾಗಿರುವ ಮದ್ಯಪ್ರಿಯರು ಉಡುಪಿಯಲ್ಲಿ ಮದ್ಯದಂಗಡಿ ಮುಂದೆ ಮುಗಿಬಿದ್ದು ಮದ್ಯವನ್ನು ಖರೀದಿಸಿ ಮನೆಗೆ ಕೊಂಡೊಯ್ಯುತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು.

ಅಪರಾಹ್ನ ನಗರಸಭೆಯ ಅಧಿಕಾರಿಗಳು ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಅಂಗಡಿಗಳನ್ನು ಮುಚ್ಚಿಸಿದ್ದರಿಂದ ಆತಂಕಿತರಾದ ಮದ್ಯಪ್ರಿಯರು ನಗರದ ಮದ್ಯದಂಗಡಿಗಳ ಮುಂದೆ ಉದ್ದನೆಯ ಕ್ಯೂನಲ್ಲಿ ನಿಂತು ತಮ್ಮ ಸರದಿ ಬಂದಾಗ, ಮದ್ಯದ ಬಾಕ್ಸ್‌ಗಳನ್ನೇ ಹೊತ್ತೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಆದರೆ ಸ್ವತಂತ್ರ ಮದ್ಯದಂಗಡಿಗಳು, ಮಳಿಗೆಗಳು, ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗಳನ್ನು ಮಾತ್ರ ನೀಡಲು ಅವಕಾಶ ಕಲ್ಪಿಸಿರುವುದಾಗಿ ಸ್ಪಷ್ಟೀಕರಣ ಬಂದಿದ್ದು, ಇದರಿಂದ ಮದ್ಯಪ್ರಿಯರು ಸಮಾಧಾನದ ನಿಟ್ಟುಸಿರುವ ಬಿಡುವಂತಾಯಿತು.

ಸರಕಾರ ಮೇ 4ರವರೆಗೆ ಹೇರಿರುವ ನಿಷೇಧಾಜ್ಞೆ, ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಸಂಪೂರ್ಣ ಕರ್ಫ್ಯೂನ ಹೊರತಾಗಿಯೂ ಇಂದು ಜನರ ಸಂಚಾರ ಎಂದಿನಂತಿತ್ತು. ಆದರೆ ಸಂಜೆ ಬಳಿಕ ಜನ ಬೇಗ ಮನೆ ಸೇರಿಕೊಳ್ಳುವ ಧಾವಂತ ಕಂಡುಬಂತು. ಎಂಟು ಗಂಟೆಯ ಬಳಿಕ ಪ್ರಮುಖ ಬೀದಿಗಳು, ಬಸ್‌ ನಿಲ್ದಾಣಗಳೆಲ್ಲಾ ಜನರಿಲ್ಲದೇ ಬಿಕೋ ಎನ್ನುತಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News