ಆ್ಯಂಟಿ ವೈರಸ್ ಔಷಧಿ ಸಂಗ್ರಹಿಸಿಟ್ಟುಕೊಂಡಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್ ವಿರುದ್ಧ ದೂರು ದಾಖಲು

Update: 2021-04-22 17:17 GMT

ಹೊಸದಿಲ್ಲಿ: ದಿಲ್ಲಿ ನಿವಾಸಿಗಳು ಸೂಕ್ತ ಔಷಧಿ ಸಿಗದೆ ಪರದಾಡುತ್ತಿರುವಾಗ ಆ್ಯಂಟಿ ವೈರಸ್ ಔಷಧಿ ಫ್ಯಾಬಿಫ್ಲುವನ್ನು ಸಂಗ್ರಹಿಸಿಟ್ಟುಕೊಂಡಿರುವ ಬಿಜೆಪಿ ಸಂಸದ ಮತ್ತು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿರುದ್ಧ  ಸಾಮಾಜಿಕ ಕಾರ್ಯಕರ್ತೆ ಮತ್ತು ಟೆಡ್ಎಕ್ಸ್ ಸ್ಪೀಕರ್ ಲೆಹರ್ ಸೇಥಿ ಅವರು ದೂರು ನೀಡಿದ್ದಾರೆ.

ಎನ್‌ಸಿಆರ್‌ಬಿ ಆನ್‌ಲೈನ್ ಪೋರ್ಟಲ್‌ನಿಂದ ತನ್ನ ದೂರಿನ ಸ್ಕ್ರೀನ್‌ಗ್ರಾಬ್‌ಗಳನ್ನು ಹಂಚಿಕೊಂಡಿರುವ ಲೆಹರ್ ಇದೊಂದು ಕಳವಳಕಾರಿ ವಿಚಾರ ಎಂದು ಟ್ವೀಟಿಸಿದರು.

ಪೂರ್ವ ದಿಲ್ಲಿ ಜನರಿಗೆ ತಮ್ಮ ಕಚೇರಿಯಲ್ಲಿ ಅತ್ಯಂತ ಪ್ರಮುಖ ಫ್ಯಾಬಿಫ್ಲು ಔಷಧಿಯನ್ನು  ಉಚಿತವಾಗಿ ವಿತರಣೆ ಮಾಡುವುದಾಗಿ ಗೌತಮ್ ಗಂಭೀರ್ ಬುಧವಾರ ಘೋಷಿಸಿದ್ದರು. ಸಂಸದರ ನಡೆಗೆ ಟ್ವಿಟರ್ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಗಂಭೀರ್ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು.

"ದಿಲ್ಲಿ ನಿವಾಸಿಗಳು ಔಷಧಿಗಾಗಿ ಪರದಾಟ ನಡೆಸುತ್ತಿರುವ ಸಮಯದಲ್ಲಿ ಫ್ಯಾಬಿಫ್ಲುವನ್ನು ಸಂಗ್ರಹಿಸಿದ್ದಕ್ಕಾಗಿ ನಾನು ಗೌತಮ್ ಗಂಭೀರ್ ವಿರುದ್ಧ ದೂರು ದಾಖಲಿಸಿದ್ದೇನೆ.  ಇದೊಂದು ಕಳವಳಕಾರಿ ವಿಚಾರ. ಏಕೆಂದರೆ ಫಾರ್ಮಸಿಗಳು ಮತ್ತು ರಸಾಯನಶಾಸ್ತ್ರಜ್ಞರು ವಾರದ 24 ಗಂಟೆ ರೋಗಿಗಳಿಗೆ ಔಷಧಿಗಳನ್ನು ನೀಡುತ್ತಾರೆ, ಆದರೆ ಗಂಭೀರ್ ಅದನ್ನು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ನೀಡುತ್ತಿದ್ದಾರೆ”ಎಂದು ಗುರುವಾರ ಮಧ್ಯಾಹ್ನ ಟ್ವೀಟ್‌ನಲ್ಲಿ ಲೆಹರ್ ಬರೆದಿದ್ದಾರೆ.

ಕಳೆದ ಕೆಲವು ದಿನಗಳಿಂದ ದಿಲ್ಲಿಯು  ಔಷಧದ ಕೊರತೆಯನ್ನು ಎದುರಿಸುತ್ತಿದೆ ಮತ್ತು ಹೆಚ್ಚಿನ ಔಷಧಾಲಯಗಳು, ರಸಾಯನಶಾಸ್ತ್ರಜ್ಞರು ಹಾಗೂ ಆಸ್ಪತ್ರೆಯ ಔಷಧಾಲಯಗಳು ಸಹ ಈ ಔಷಧಿ ಕೊರತೆ ಎದುರಿಸುತ್ತಿದ್ದಾರೆ. ಅಗತ್ಯ ಸರಕುಗಳ ಕಾಯ್ದೆಯ ಪ್ರಕಾರ ಔಷಧಿಗಳನ್ನು ಸಂಗ್ರಹಿಸುವುದು ಕಾನೂನುಬಾಹಿರ. ಈ ಸನ್ನಿವೇಶಗಳಲ್ಲಿ  ಜನಪ್ರತಿನಿಧಿಯಾಗಿರುವ  ಗೌತಮ್ ಗಂಭೀರ್ ಅವರು ಇಷ್ಟೊಂದು ಪ್ರಮಾಣದಲ್ಲಿ ಔಷಧಿ ಸಂಗ್ರಹಿಸಲು ಹೇಗೆ ಸಾಧ್ಯವಾಯಿತು ಎಂದು ಲೆಹರ್ ತಮ್ಮ ದೂರಿನಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News