ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆ: ಆರೋಪ, ಪ್ರತ್ಯಾರೋಪ

Update: 2021-04-22 17:17 GMT

ಉಪ್ಪಿನಂಗಡಿ: ಇಲ್ಲಿನ ಗ್ರಾ.ಪಂ.ನಲ್ಲಿ ಎ.17ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅನಧಿಕೃತ ಅಂಗಡಿಯೊಂದಕ್ಕೆ ವ್ಯಾಪಾರ ಪರವಾನಿಗೆ ನೀಡಲು ಹಣ ಪಡೆದ ವಿಚಾರವಾಗಿ ಪ್ರಸ್ತಾಪವಾದ ಗಂಭೀರ ಆಪಾದನೆಯನ್ನು  ವರದಿ ಮಾಡಿದ ಪತ್ರಿಕಾ ವರದಿಯ ಬಗ್ಗೆ ಎ.22ರಂದು ನಡೆದ ಮುಂದುವರೆದ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಪ್ರಬಲ ಆಕ್ಷೇಪ ವ್ಯಕ್ತವಾಗಿ ವರದಿಯ ವಿರುದ್ಧ ಅಗತ್ಯ ಕ್ರಮ ಜರುಗಿಸಬೇಕೆಂದು ಅಗ್ರಹಿಸಲ್ಪಟ್ಟ ವಿಲಕ್ಷಣ ಘಟನೆ ನಡೆದಿದೆ. 

ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯರವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಉಪ್ಪಿನಂಗಡಿ ಗ್ರಾಮ ಪಂಚಾಯತ್‍ನ ಮುಂದುವರೆದ ಸಾಮಾನ್ಯ ಸಭೆಯಲ್ಲಿ ಕಳೆದ ಬಾರಿಯ ಸಭೆಯಲ್ಲಿ ಅನಧಿಕೃತ ಬೇಕರಿಯೊಂದಕ್ಕೆ ಒಂದೂವರೆ ಲಕ್ಷ ರೂಪಾಯಿ ಹಣ ಪಡೆದು ವ್ಯಾಪಾರ ಪರವಾನಿಗೆ ಕೊಡಲಾಗಿದೆ ಎಂಬ ಆರೋಪದ ಬಗ್ಗೆ ಬಂದ ಪತ್ರಿಕಾ ವರದಿಯ ಬಗ್ಗೆ ವಿಚಾರ ಪ್ರಸ್ತಾಪವಾಗಿ ಸಭೆಯುದ್ದಕ್ಕೂ ಇದ್ದ  ವರದಿಗಾರ ತನ್ನ ಪತ್ರಿಕೆಯಲ್ಲಿ ಬರೆದ ವರದಿಗೂ, ಕೆಲ ಕಾಲ ಮಾತ್ರ ಇದ್ದು ಹೋದ ವರದಿಗಾರ ತನ್ನ ಪತ್ರಿಕೆಯಲ್ಲಿ  ಬರೆದ ವರದಿಗೂ ಬಹಳಷ್ಟು ವ್ಯತ್ಯಾಸವಿದೆ. ಅನಧಿಕೃತ ಅಂಗಡಿಗೆ ಅಕ್ರಮವಾಗಿ ವ್ಯಾಪಾರ ಪರವಾನಿಗೆ  ನೀಡಲು ಒಂದೂವರೆ ಲಕ್ಷ ಹಣ ಪಡೆಯಲಾದ ಬಗ್ಗೆ ಯಾವುದೇ ವಿಚಾರ ಪ್ರಸ್ತಾಪವಾಗದಿದ್ದರೂ, ಅದನ್ನು ಪ್ರಸ್ತಾಪವಾಗಿದೆ ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ ಎಂದು ಪ್ರಬಲ ಆರೋಪ ಸಭೆಯಲ್ಲಿ ಕೇಳಿ ಬಂತು.  ಈ ಬಗ್ಗೆ ಸಭೆಯಲ್ಲಿದ್ದ ಯಾವೊಬ್ಬ ಸದಸ್ಯನೂ ಆಕ್ಷೇಪಿಸದೆ ವರದಿಯೇ ತಪ್ಪು ಬಂದಿದೆ ಎಂಬಂತೆ ಧ್ವನಿಸಿ, ಸಂಬಂಧಿಸಿದ ವರದಿಗೆ ಅಗತ್ಯ ಕ್ರಮ ಜರುಗಿಸಲು ಒತ್ತಾಯಿಸಿದರು. ಮತ್ತೂ ಮುಂದುವರಿದ ಕೆಲ ಸದಸ್ಯರು ಇಂತಹ ವರದಿಯಿಂದ ಗ್ರಾ.ಪಂ.ಗೆ ಕೆಟ್ಟ ಹೆಸರು ಎಂದರು.

'ನಿಲುವು ಬದಲಾಯಿಸಿದ ಸದಸ್ಯರು'

ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ಪಿಡಿಒ ವಿರುದ್ಧ ಆಪಾದನೆ ಮಾಡಿದ್ದರು. ಗ್ರಾ.ಪಂ. ಸದಸ್ಯ ಸುರೇಶ್ ಅತ್ರೆಮಜಲು ಉಪ್ಪಿನಂಗಡಿಯಲ್ಲಿರುವ ಅನಧಿಕೃತ ಬೇಕರಿಯೊಂದಕ್ಕೆ ವ್ಯಾಪಾರ ಪರವಾನಿಗೆ ಕೊಡಲಾಗಿದೆ. ಆ ಪರವಾನಿಗೆ ಕೊಡುವುದಕ್ಕೆ ನೀವು ಒಂದೂವರೆ ಲಕ್ಷ ರೂಪಾಯಿ ಪಡೆದುಕೊಂಡಿದ್ದೀರಿ ಎಂದು ನಿಮ್ಮ ಮೇಲೆ ಆರೋಪವಿದೆ ಎಂದು ನೇರವಾಗಿ ಪಿಡಿಒ ಅವರ ಮೇಲೆ ಗಂಭೀರ ಆರೋಪ ಹೊರಿಸಿದ್ದರು. ಅಂದು ಇಂತಹ ಚರ್ಚೆಗಳೇ ಬಹುಪಾಲು ಸಾಗಿದ್ದರಿಂದ ಬೆಳಗ್ಗೆ ಆರಂಭವಾದ ಸಭೆ ಸಂಜೆಯವರೆಗೂ ಮುಗಿಯದೇ ಸಭೆಯನ್ನು ಗುರುವಾರಕ್ಕೆ ಮುಂದೂಡಲಾಗಿತ್ತು. ಆದರೆ ಗುರುವಾರ ನಡೆದ ಮುಂದುವರಿದ ಸಭೆಯಲ್ಲಿ ಸದಸ್ಯರು ಸಂಪೂರ್ಣ ಬದಲಾದವರಂತೆ ಕಂಡು ಬಂದಿದ್ದರು. ಶನಿವಾರದ ಸಭೆಯಲ್ಲಿ ಆರ್ಥಿಕ ಅವ್ಯವಹಾರದ ಆರೋಪ ಮಾಡಿದ್ದ ಸದಸ್ಯರು, ಗುರುವಾರದ ಸಭೆಯಲ್ಲಿ ಮಾತ್ರ ಧ್ವನಿಸಿದ ಧ್ವನಿಯನ್ನೇ ದ್ವನಿಸಲಿಲ್ಲವೆಂದು ಪ್ರತಿಪಾದಿಸಿದರು. ಪಂಚಾಯತ್ ಸದಸ್ಯರ ಈ ನಡೆಯನ್ನು ನಿರೀಕ್ಷಿಸಿದ್ದ ಪತ್ರಿಕಾ ವರದಿಗಾರರು ಶನಿವಾರದ ಆರ್ಥಿಕ ಅವ್ಯವಹಾರದ ಆಪಾದನೆಯ ವಿಡಿಯೋವನ್ನು ಮುಂದಿರಿಸಿ ವರದಿಯ ಸತ್ಯಾಸತ್ಯತೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿದರು.

ಈ ಮಧ್ಯೆ ಪಂಚಾಯತ್ ಆಡಳಿತದಿಂದ ಗುರುವಾರ ಪತ್ರಿಕಾ ವರದಿಯ ಬಗ್ಗೆ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವರದಿ ವ್ಯಕ್ತಗೊಂಡ ಆಕ್ರೋಶವನ್ನು ಹೊಂದಿದ್ದ ವಿಡಿಯೋವನ್ನು ಪಂಚಾಯತ್ ಅಧಿಕಾರಿಯು ಪತ್ರಿಕಾ ಕಚೇರಿಯೊಂದಕ್ಕೆ  ರವಾನಿಸಿ ಶನಿವಾರದ  ಸಭೆಯ ಬಗ್ಗೆ ವ್ಯಕ್ತಗೊಂಡ ವರದಿಯು ಸುಳ್ಳೆಂದು ಸಾಬೀತು ಪಡಿಸಲು ಯತ್ನಿಸಿದರಾದರೂ, ಒಡನೆಯೇ ಶನಿವಾರದ ಸಭೆಯ ಕಾರ್ಯಕಲಾಪದ ವಿಡಿಯೋ ಪ್ರಸಾರಗೊಂಡು ಪಂಚಾಯತ್ ಅಧಿಕಾರಿಯು ಸಮಾಜಕ್ಕೆ ತಪ್ಪು ಮಾಹಿತಿ ಯನ್ನು ನೀಡುವುದನ್ನು ರುಜು ಪಡಿಸಲಾಯಿತು.

ಇತ್ತ ಶನಿವಾರ ಭ್ರಷ್ಟಾಚಾರ, ಅಕ್ರಮವಾಗಿ ಪರವಾನಿಗೆ ನೀಡುವುದಕ್ಕೆ ಹಣ ಪಡೆದು ಸಹಕರಿಸಿದ ಕೃತ್ಯಗಳನ್ನು ತಾರಕ ಧ್ವನಿಯಲ್ಲಿ ಪ್ರಶ್ನಿಸುತ್ತಿದ್ದ ಪಂಚಾಯತ್ ಸದಸ್ಯರು ಗುರುವಾರದ ಸಭೆಯಲ್ಲಿ ಸೌಮ್ಯವಾದಿಗಳಂತೆ ಬದಲಾಗಿರುವುದು ಸಂಶಯಕ್ಕೂ ಕಾರಣವಾಗಿತ್ತು. ಯಾರದ್ದೋ ಸ್ವಾರ್ಥಕ್ಕಾಗಿ, ಯಾವುದೋ ಲಾಭಕ್ಕಾಗಿ ಮಾಧ್ಯಮದ ವಸ್ತು ನಿಷ್ಠ  ವರದಿಯನ್ನೇ ಸುಳ್ಳೆಂದು ನಿಂದಿಸುವ ಮಟ್ಟಿಗೆ ಇಳಿದ ದೃಶ್ಯ ಗುರುವಾರದ ಸಭೆಯಲ್ಲಿ ಕಂಡು ಬಂದಿತ್ತು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತಾಪವಾಗಿರಬಹುದು!

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಸದಸ್ಯ ಸುರೇಶ್ ಅತ್ರೆಮಜಲು, ಅನಧಿಕೃತ ಬೇಕರಿಯೊಂದಕ್ಕೆ ವ್ಯಾಪಾರ ಪರವಾನಿಗೆ ನೀಡಲು ಪಿಡಿಒ ಅವರು ಒಂದೂವರೆ ಲಕ್ಷ ರೂಪಾಯಿ ಹಣ ಪಡೆದ ಬಗ್ಗೆ ಎ.17ರ ಸಭೆಯಲ್ಲಿ ಪ್ರಸ್ತಾಪವಾಗಿರಬಹುದು. ಎ.22ರ ಮುಂದುವರಿದ ಸಾಮಾನ್ಯ ಸಭೆಗೆ ಆಗಮಿಸುವಾಗ ನಾನು ಸ್ವಲ್ಪ ತಡವಾಗಿದೆ. ಆಗ ಪತ್ರಿಕಾ ವರದಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವಿಚಾರ ಮುಗಿದು ಹೋಗಿದೆ. ಮತ್ತೆ ನನ್ನ ಗಮನಕ್ಕೆ ಬಂದು ನಾನು ಈ ವಿಚಾರವನ್ನು ಮತ್ತೆ ಪ್ರಸ್ತಾಪಿಸಲ್ಲ ಎಂದು ಸದಸ್ಯ ಲೊಕೇಶ್ ಅವರಲ್ಲಿ ಕೇಳಿದೆ. ಅದಕ್ಕೆ ಬೇಡ ಅದು ಮುಗಿದು ಹೋಗಿದೆ ಎಂದು ಉತ್ತರಿಸಿರುವುದಾಗಿ ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News