ಕೋವಿಡ್‌ ವಿರುದ್ಧದ ಭಾರತದ ಹೋರಾಟಕ್ಕೆ ಸಹಾಯ ಮಾಡಲು ಮುಂದಾದ ಪಾಕಿಸ್ತಾನದ ಈದಿ ಫೌಂಡೇಶನ್‌ ನಿಂದ ಪ್ರಧಾನಿಗೆ ಪತ್ರ

Update: 2021-04-23 12:35 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಪಾಕಿಸ್ತಾನ ಮೂಲದ ಸಮಾಜ ಸೇವಾ ಸಂಘಟನೆ ಈಧಿ ಫೌಂಡೇಶನ್   ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯಿಂದ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಸಹಾಯ ಮಾಡಲು ಮುಂದೆ ಬಂದಿದೆ.

ಫೌಂಡೇಶನ್ ಅಧ್ಯಕ್ಷ ಫೈಸಲ್ ಈಧಿ ಈ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಇಂದು ಪತ್ರ ಬರೆದು ಭಾರತಕ್ಕೆ ತಮ್ಮ ತಂಡದ ಸ್ವಯಂಸೇವಕರು ಹಾಗೂ 50 ಅಂಬ್ಯುಲೆನ್ಸ್‍ಗಳೊಂದಿಗೆ ಪ್ರವೇಶಿಸಲು ಅನುಮತಿ ಕೋರಿದ್ದಾರೆ. ತಮ್ಮ ತಂಡದ ನೇತೃತ್ವವನ್ನು ತಾವೇ ವಹಿಸುವುದಾಗಿಯೂ ಫೈಸಲ್ ಹೇಳಿದ್ದಾರೆ.

"ನಿಮ್ಮ ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ  ಉಂಟು ಮಾಡಿರುವ ಭಾರೀ ಸಮಸ್ಯೆ ಬಗ್ಗೆ ತಿಳಿದು  ಬೇಸರಗೊಂಡಿದ್ದೇವೆ. ಭಾರೀ ಸಂಖ್ಯೆಯ ಜನರು ಕಷ್ಟ ಪಡುತ್ತಿದ್ದಾರೆಂದು ಕೇಳಿದ್ದೇವೆ  ನಾವು 50 ಅಂಬ್ಯುಲೆನ್ಸ್‍ಗಳೊಂದಿಗೆ ನಮ್ಮ ಸೇವೆ  ಒದಗಿಸಿ ಸಹಾಯ ಮಾಡಲು ಬಯಸಿದ್ದೇವೆ" ಎಂದು ಫೈಸಲ್ ಈಧಿ ಅವರು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

"ನಾವು ಕೇವಲ ತಮ್ಮ ತಂಡ ಹಾಗೂ ಅಗತ್ಯ ತಂತ್ರಜ್ಞರು, ಸಿಬ್ಬಂದಿ, ಚಾಲಕರ ಜತೆ ಭಾರತ ಪ್ರವೇಶಿಸಲು ಬಯಸುತ್ತೇವೆ. ನಮ್ಮ ತಂಡಕ್ಕೆ ಅಗತ್ಯವಿರುವ ಎಲ್ಲಾ ಸಲಕರಣೆಗಳನ್ನೂ ನಾವೇ ಏರ್ಪಾಟು ಮಾಡಿ ಭಾರತದ ಜನರಿಗೆ ಸಹಾಯ ಮಾಡುತ್ತೇವೆ. ನಮ್ಮ ತಂಡಕ್ಕೆ ಅಗತ್ಯವಿರುವ ಇಂಧನ, ಆಹಾರ ಹಾಗೂ ಇತರ ಸವಲತ್ತುಗಳನ್ನು ನಾವೇ ಒದಗಿಸುವುದರಿಂದ ನಿಮ್ಮಿಂದ ಬೇರೆ ಯಾವುದೇ ಸಹಾಯ ಕೇಳುವುದಿಲ್ಲ. ಕೇವಲ ಭಾರತ ಪ್ರವೇಶಿಸಲು ಹಾಗೂ ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಅಗತ್ಯ ಮಾರ್ಗದರ್ಶನವನ್ನಷ್ಟೇ ನಾವು ಕೋರುತ್ತೇವೆ" ಎಂದು ಪತ್ರದಲ್ಲಿ ಬರೆಯಲಾಗಿದೆ.

ಪಾಕಿಸ್ತಾನದಲ್ಲಿರುವ ಅತ್ಯಂತ ದೊಡ್ಡ  ಚ್ಯಾರಿಟೇಬಲ್ ಅಂಬ್ಯುಲೆನ್ಸ್ ಜಾಲದ ನೇತೃತ್ವವನ್ನು ಫೈಸಲ್ ಈಧಿ ವಹಿಸಿದ್ದಾರೆ.  ಪಾಕಿಸ್ತಾನವನ್ನು  ಆಕಸ್ಮಿಕವಾಗಿ ಪ್ರವೇಶಿಸಿ ಅಲ್ಲಿ ನಿರ್ಗತಿಕಳಾಗಿದ್ದ ಭಾರತೀಯ ಯುವತಿ ಗೀತಾಳಿಗೆ ಆಸರೆ ನೀಡಿ ಆಕೆಯ ಭಾರತೀಯ ಹೆತ್ತವರನ್ನು ಗುರುತಿಸಿ ಆಕೆ ಮರಳಿ ತನ್ನ ಕುಟುಂಬವನ್ನು ಸೇರುವಲ್ಲಿ ಕೂಡ ಈಧಿ ಫೌಂಡೇಶನ್ ಪ್ರಮುಖ ಪಾತ್ರ ವಹಿಸಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕೋವಿಡ್ 2ನೇ ಅಲೆಯನ್ನು ಎದುರಿಸಲು ಭಾರತಕ್ಕೆ ಸಹಾಯ ಮಾಡಿ ಎಂದು ಪಾಕಿಸ್ತಾನೀಯರು ಟ್ವಿಟ್ಟರ್ ಮೂಲಕ ತಮ್ಮ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಆಗ್ರಹಿಸಿದ ಬೆನ್ನಲ್ಲೇ ಈಧಿ ಫೌಂಡೇಶನ್ ಭಾರತಕ್ಕೆ ಸಹಾಯಹಸ್ತ ಚಾಚಿದೆ.

ಫೈಸಲ್ ಈಧಿ ಅವರು ಭಾರತದ ಪ್ರಧಾನಿಗೆ ಪತ್ರ ಬರೆದಿರುವುದಕ್ಕೆ ಅಲ್ಲಿನ ನಾಗರಿಕರು ಅವರನ್ನು ಶ್ಲಾಘಿಸಿದ್ದಾರಲ್ಲದೆ ಅವರ ಪತ್ರ ಕೂಡ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News