×
Ad

ಮಂಗಳೂರು: ಮೇ 4ರವರೆಗೆ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ

Update: 2021-04-23 19:51 IST

ಮಂಗಳೂರು, ಎ.23: ಜನಸಾಮಾನ್ಯರಿಗೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸೇರಿದಂತೆ ಸಾಕಷ್ಟು ಗೊಂದಲಗಳಿದ್ದು, ಇದನ್ನು ಈಗಾಗಲೇ ಜಿಲ್ಲಾಡಳಿತದ ವತಿಯಿಂದ ನಿವಾರಿಸುವ ಪ್ರಯತ್ನವಾಗುತ್ತಿದೆ. ನೈಟ್ ಕರ್ಫ್ಯೂ ಎಂದಾಕ್ಷಣ ಕೇವಲ ರಾತ್ರಿ ಹೊತ್ತು ಮಾತ್ರ ಅಗತ್ಯ ಸೇವೆಗಳಿಗೆ ಅವಕಾಶ ಎಂಬ ತಪ್ಪು ಕಲ್ಪನೆ ಇದೆ. ರಾಜ್ಯ ಸರಕಾರದ ನಿರ್ದೇಶನದ ಪ್ರಕಾರ ಮೇ 4ರವರೆಗೆ ತರಕಾರಿ, ಮೀನು, ಮಾಂಸ, ಮೆಡಿಕಲ್, ಆಸ್ಪತ್ರೆ, ಕಟ್ಟಡ ನಿರ್ಮಾಣ ಮಾತ್ರವೇ ಅಗತ್ಯ ಸೇವೆಗಳಾಗಿವೆ. ಉಳಿದಂತೆ ಬಟ್ಟೆಬರೆ, ಜುವೆಲ್ಲರಿ, ಫೂಟ್‌ವೇರ್ ಯಾವುದಕ್ಕೂ ವೀಕೆಂಡ್ ಕರ್ಫ್ಯೂ ಮಾತ್ರವಲ್ಲದೆ ಉಳಿದ ದಿನಗಳಲ್ಲಿಯೂ ವ್ಯವಹಾರಕ್ಕೆ ಅವಕಾಶವಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಿರ್ಮಾಣ ಕಾಮಗಾರಿ ಅಗತ್ಯ ಸೇವೆಯೆಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ವೀಕೆಂಡ್ ಹೊರತು ಪಡಿಸಿ ಉಳಿದ ದಿನಗಳಲ್ಲಿ ಅದಕ್ಕೆ ಸಂಬಂಧಿಸಿ ಸಾಮಗ್ರಿಗಳ ಅಂಗಡಿಗಳು, ಕೋವಿಡ್ ನಿಯಮ ಪಾಲಿಸಿ ಸೆಲೂನ್, ಬ್ಯೂಟಿಪಾರ್ಲರ್‌ಗಳಿಗೆ ಕಾರ್ಯಾಚರಿಸಲು ಅವಕಾಶವಿದೆ. ಆದರೆ ವೀಕೆಂಡ್ ಕರ್ಫ್ಯೂನಲ್ಲಿ ನಿರ್ಮಾಣ ಕಾಮಗಾರಿ ಸೇರಿದಂತೆ ಇತರ ಎಲ್ಲಾ ವ್ಯವಹಾರಗಳೂ ಬಂದ್ ಆಗಲಿವೆ. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ದಿನ ಬಳಕೆಯ ವಸ್ತುಗಳ ಖರೀದಿಗೆ ವೀಕೆಂಡ್ ಕರ್ಪ್ಯೂನಲ್ಲಿ ಅವಕಾಶ ಕಲ್ಪಿಸಲಾಗಿದೆ.

ವೀಕೆಂಡ್ ಕರ್ಫ್ಯೂ ಸಂದರ್ಬ ವಲಸೆ ಕಾರ್ಮಿಕರು ಸೇರಿದಂತೆ ಕಟ್ಟಡ ಕಾರ್ಮಿಕರಿಗೆ ಆಶ್ರಯ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಕ್ರೆಡೈ, ಕೆಸಿಸಿಐ, ಕೈಗಾರಿಕೆಗಳ ಮುಖ್ಯಸ್ಥರ ಜತೆ ಸಭೆ ನಡೆಸಿ ಸಲಹೆ ನೀಡಲಾಗಿದೆ. ದ.ಕ. ಜಿಲ್ಲೆ ಲಕ್ಷಾಂತರ ಸಂಖ್ಯೆಯ ವಲಸೆ ಕಾರ್ಮಿಕರ ಮೇಲೆ ಅವಲಂಬಿತವಾಗಿರುವುದರಿಂದ ಅವರ ರಕ್ಷಣೆ ನಮ್ಮ ಹೊಣೆಯಾಗಿದೆ. ವೀಕೆಂಡ್ ಕರ್ಫ್ಯೂ ವೇಳೆ ಹೆದ್ದಾರಿ ಬದಿಯ ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಅಗತ್ಯ ಸೇವೆಗಳನ್ನು ಪೂರೈಸುವ ಲಾರಿ ಚಾಲಕರು ಹಾಗೂ ಇತರರಿಗೆ ಪಾರ್ಸೆಲ್ ಸೇವೆಗೆ ಅವಕಾಶವಿರುತ್ತದೆ. ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲಾಗುವುದು. ಸಾರ್ವಜನಿಕರು ಸರಕಾರದ ನಿಯಮಾವಳಿಯ, ಆದೇಶವನ್ನು ಪಾಲಿಸಿಕೊಂಡು ಜಿಲ್ಲೆಯಲ್ಲಿ ಇನ್ನೂ ಕಠಿಣ ಪರಿಸ್ಥಿತಿಯ ಲಾಕ್‌ಡೌನ್ ಆಗದಿರಲು ನಿಯಮ ಪಾಲನೆ ಮಾಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮನವಿ ಮಾಡಿದರು.

ಶಾಲಾ ಕಾಲೇಜು ಕೊಠಡಿಗಳಲ್ಲಿ ತರಗತಿ ನಡೆಸಿದರೆ ಕ್ರಮ

ಯಾವುದೇ ಕಾಲೇಜು, ವಸತಿಯುತ ಕಾಲೇಜುಗಳಲ್ಲಿ ಕೊಠಡಿಗಳಲ್ಲಿ ತರಗತಿಗಳನು ನಡೆಸಲು ಅವಕಾಶ ಇಲ್ಲ. ಈಗಾಗಲೇ ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ನೋಟೀಸು ನೀಡಲಾಗಿದೆ. ಇದನ್ನು ಮೀರಿ ಪಾಠಗಳನ್ನು ನಡೆಸುವ ಬಗ್ಗೆ ದೂರುಗಳು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಎಚ್ಚರಿಕೆ ನೀಡಿದರು.

ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ರಾಜೀವ್ ಗಾಂಧಿ ಆರೋಗ್ಯ ಇಲಾಖೆಯಿಂದ ವಿಶೇಷ ಅನುಮತಿಯ ಮೇರೆಗೆ ಪರೀಕ್ಷೆಗಾಗಿ ತರಗತಿ ಮಾಡಲು ಅವಕಾಶ ನೀಡಲಾಗಿದೆ. ವಿಟಿಯು ಇಂಜಿನಿಯರ್ ಕಾಲೇಜಿಗೂ ಪರೀಕ್ಷೆಗಳನ್ನು ಮುಂದೂಡಲು ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News