ಸರಕಾರಿ ಆದೇಶ ಪಾಲನೆಗೆ ರಸ್ತೆಗಿಳಿದ ಕಮಿಷನರ್: ಕಿ.ಮೀ. ನಡೆದುಕೊಂಡೇ ಜಾಗೃತಿ, ಎಚ್ಚರಿಕೆ
ಮಂಗಳೂರು, ಎ. 23: ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಿ ರಾಜ್ಯ ಸರಕಾರ ಆದೇಶ ನೀಡಿದ ಹೊರತಾಗಿಯೂ ನಗರದಲ್ಲಿ ಕೆಲವೊಂದು ಬೃಹತ್ ಮಳಿಗೆಗಳು, ಅಂಗಡಿಗಳು ವ್ಯವಹಾರ ನಡೆಸುತ್ತಿದ್ದ ವಿರುದ್ಧ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹಿರಿಯ ಅಧಿಕಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿದರು.
ನಗರದ ಕ್ಲಾಕ್‌ಟವರ್‌ನಿಂದ ಬೆಳಗ್ಗೆ 11.45ಕ್ಕೆ ಡಿಸಿಪಿ ಹರಿರಾಂ ಶಂಕರ್ ಹಾಗೂ ಹಿರಿಯ ಅಧಿಕಾರಿಗಳ ಜತೆಯಲ್ಲಿ ರಸ್ತೆಗಿಳಿದ ಪೊಲೀಸ್ ಆಯುಕ್ತರು, ನಗರದ ಹಂಪನಕಟ್ಟೆ, ಮಾರ್ಕೆಟ್ ರಸ್ತೆ, ಹಂಪನಕಟ್ಟೆ ಜಂಕ್ಷನ್, ಹಳೇ ಬಸ್ ನಿಲ್ದಾಣ, ಬಲ್ಮಠ ರಸ್ತೆ, ಪಳ್ನೀರ್ ರಸ್ತೆ, ಕಂಕನಾಡಿಯರೆಗೆ ಕಾಲ್ನಡಿಗೆಯಲ್ಲೇ ಕಿ.ಮೀ.ಗಳು ರೌಂಡಪ್ ನಡೆಸಿದರು.
ಅಗತ್ಯ ಸೇವೆಗಳನ್ನು ಹೊರತುಪಡಿಸಿ ತೆರೆಯಲಾಗಿದ್ದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ಮಾತ್ರವಲ್ಲದೆ, ಬೃಹತ್ ಚಿನ್ನದ ಮಳಿಗೆಗಳು, ಕೆಲ ಸಣ್ಣ ಮಾಲ್‌ಗಳಿಗೆ ಪ್ರವೇಶಿಸಿದ ಕಮಿಷನರ್ ತಂಡ ಬಂದ್ ಮಾಡುವಂತೆ ಸೂಚಿಸಿದರಲ್ಲದೆ, ಪ್ರಕರಣವನ್ನೂ ದಾಖಲಿಸಲು ಸೂಚಿಸಿದರು.
ನಿಯಮ ಮೀರಿಯೂ ವ್ಯವಹಾರ ನಡೆಸಿದ ಮ್ಯಾಕ್‌ಮಾಲ್, ಬ್ರ್ಯಾಂಡ್ ಫ್ಯಾಕ್ಟರಿ, ಚಿನ್ನದ ಮಳಿಗೆ ಮೇಲ್ವಿಚಾಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ನಗರದ ಮಿಲಾಗ್ರಿಸ್ ರಸ್ತೆಯಲ್ಲಿ ಬಸ್ ಹತ್ತಿದ ಪೊಲೀಸ್ ಕಮಿಷನರ್ ಮತ್ತು ಡಿಸಿಪಿಯವರು ಪ್ರಯಾಣಿಕರನ್ನು ಮಾತನಾಡಿಸಿ ದರು. ಸೀಟ್‌ನಲ್ಲಿ ತಾಯಿ ತನ್ನ ಪುಟ್ಟ ಮಗುವಿನೊಂದಿಗೆ ಮಾಸ್ಕ್ ಧರಿಸಿ ಕುಳಿತಿದ್ದನ್ನು ಕಂಡು ಕಮಿಷನ್ ತಂಡ, ಗುಲಾಬಿ ನೀಡಿ ಅಭಿನಂದಿಸಿತು. ರಸ್ತೆಯಲ್ಲಿ ಮಾಸ್ಕ್ ಹಾಕಿ ಸಾಗುತ್ತಿದ್ದ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳಿಗೆ ಗುಲಾಬಿ ನೀಡಿದ ಕಮಿಷನರ್, ಅಭಿನಂದಿಸಿ, ಆರೋಗ್ಯದ ಬಗ್ಗೆ ಎಚ್ಚರಿಕೆಯಿರುವಂತೆ ಸಲಹೆ ನೀಡಿದರು. ಮಿಲಾಗ್ರಿಸ್ ರಸ್ತೆಯಲ್ಲಿ ನಗರಕ್ಕೆ ಬಂದ ಕುಟುಂಬವೊಂದರ 6ಮಂದಿಗೆ ಗುಲಾಬಿ ನೀಡಿ ಕೋವಿಡ್ ನಿಯಮ ಪಾಲನೆಗೆ ಅಭಿನಂದಿಸಿದರು.
ಕಾರ್ಯಾಚರಣೆ ವೇಳೆ ನಗರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಟರಾಜ್ ಮತ್ತು ಅಧಿಕಾರಿಗಳು, ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
ನಗರದ ಫಳ್ನೀರ್, ಹಂಪನಕಟ್ಟೆ, ಬಲ್ಮಠ ರಸ್ತೆಯಲ್ಲಿರುವ ಚಿನ್ನದ ಅಂಗಡಿ ಪ್ರವೇಶಿಸಿದ ಕಮಿಷನರ್ ಟೀಮ್ ಪರಿಶೀಲನೆ ನಡೆಸಿತು. ಎಲ್ಲ ಮಳಿಗೆಗಳನ್ನು ಕೂಡಲೇ ಬಂದ್ ಮಾಡುವಂತೆ ಸೂಚನೆ ನೀಡಿದರು.
ಹಿರಿಯ ನಾಗರಿಕರಿಗೆ ಕಿವಿಮಾತು
ಚಿನ್ನದ ಮಳಿಗೆಗೆ ಕುಟುಂಬದ ಜತೆ ಆಗಮಿಸಿದ ಹಿರಿಯ ನಾಗರಿಕ ಮಹಿಳೆಯೊಬ್ಬರಿಗೆ ‘ಆದಷ್ಟು ಮನೆಯಲ್ಲಿಯೇ ಕುಳಿತುಕೊಳ್ಳಿ ಅಮ್ಮ, ಸುರಕ್ಷತೆಗೆ ಒತ್ತು ನೀಡಿ, ಹೊರಗೆ ಸುತ್ತಾಡಬೇಡಿ’ ಎಂದು ಕಿವಿಮಾತು ಹೇಳಿದರು.
ನಗರದ ಕಂಕನಾಡಿ ಬಳಿ ಮಾಲ್ ಒಂದು ತೆರೆದಿದ್ದು, ಅಲ್ಲಿ ಡಿಜಿಟಲ್ ಹಾಗೂ ಜವಳಿ ಶಾಪ್ ಕಾರ್ಯಾಚರಿಸುತ್ತಿದ್ದನ್ನು ಕಂಡ ಪೊಲೀಸ್ ಆಯುಕ್ತರು ಸಿಡಿಮಿಡಿಗೊಂಡರು.
‘‘ಅಗತ್ಯ ಸೇವೆಯಲ್ಲದ ಸಣ್ಣಪುಟ್ಟ ಅಂಗಡಿಗಳವರೂ ಸರಕಾರದ ನಿಯಮ ಪಾಲನೆ ಮಾಡಿ ಸಹಕಾರ ನೀಡುತ್ತಿದ್ದಾರೆ. ಆದರೆ ವಿದ್ಯಾವಂತರೇ ಹೆಚ್ಚಿರುವ ಇಂತಹ ಬೃಹತ್ ಶಾಪ್‌ಗಳಲ್ಲಿ ನಿಯಮಾವಳಿ ಉಲ್ಲಂಘನೆ ಮಾಡಿ ಕಾರ್ಯಾಚರಿಸುತ್ತಿರುವುದು ಬೇಸರದ ಸಂಗತಿ’’ ಎಂದು ಶಾಪ್‌ದಾರರನ್ನು ತರಾಟೆಗೈದರು.
ಚಪ್ಪಾಳೆ ತಟ್ಟಿ ಶ್ಲಾಘನೆ
ನಗರದ ಡಾನ್‌ಬಾಸ್ಕೋ ರಸ್ತೆಯಿಂದ ಫಳ್ನೀರ್ ಕಡೆಗೆ ಪೊಲೀಸ್ ಆಯುಕ್ತರ ತಂಡ ಸಾಗುತ್ತಿದ್ದ ವೇಳೆ ದಾರಿ ಮದ್ಯೆ ಹಿರಿಯ ನಾಗರಿಕ ಮಹಿಳೆಯೊಬ್ಬರು ಮಾಸ್ಕ್ ಧರಿಸಿಕೊಂಡು ಚೀಲ ಹಿಡಿದುಕೊಂಡು ಸಾಗುತ್ತಿದ್ದಾಗ ಅವರಿಗೆ ಗುಲಾಬಿ ನೀಡಿತು. ಮಾತ್ರವಲ್ಲದೆ ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಬಳಿಕ ಪೊಲೀಸ್ ಕಮಿಷನರ್ ಮುಂದೆ ಸಾಗುತ್ತಿದ್ದಂತೆಯೇ ಅಲ್ಲಿ ಅಪಾರ್ಟ್‌ಮೆಂಟ್ ಒಂದರಲ್ಲಿ ಈ ಘಟನೆಯನ್ನು ವೀಕ್ಷಿಸುತ್ತಿದ್ದ ಮಹಿಳೆಯರು ಮಕ್ಕಳು ಕಮಿಷನರ್ ಕಾರ್ಯಕ್ಕೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು.