×
Ad

ಉಡುಪಿ ಕೋರ್ಟ್ ಆವರಣದಲ್ಲಿ ಭೋಜನ ಕೂಟ : ಕೋವಿಡ್-19 ನಿಯಮ ಉಲ್ಲಂಘನೆ ಆರೋಪ

Update: 2021-04-23 20:39 IST

ಉಡುಪಿ, ಎ.23: ಹೆಚ್ಚುತ್ತಿರುವ ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಶುಕ್ರವಾರ ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಭೋಜನ ಕೂಟ ಆಯೋಜಿಸಿರುವ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕೋವಿಡ್ ನಿಯಮಾವಳಿಗಳ ಹೊರತಾಗಿಯೂ ವಕೀಲರು ಸೇರಿದಂತೆ 300ಕ್ಕೂ ಅಧಿಕ ಜನ ಈ ಭೋಜನ ಕೂಟದಲ್ಲಿ ಭಾಗಿಯಾಗಿದ್ದರೆನ್ನಲಾಗಿದೆ. ಶಾಮಿಯಾನದ ಅಡಿಯಲ್ಲಿ ಗುಂಪಾಗಿ ಭೋಜನ ಮಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು, ನಗರಸಭೆ ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಭೋಜನಕೂಟ ಮುಗಿಯುವ ತನಕವೂ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯಲಿಲ್ಲ ಮತ್ತು ಕಾರ್ಯಾಚರಣೆ ನಡೆಸಲಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಯಾವ ಉದ್ದೇಶಕ್ಕೆ ಈ ಭೋಜನಕೂಟ ಆಯೋಜನೆಯಾಗಿತ್ತು ಎಂಬುದು ಬಹಿರಂಗಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ ಧೋರಣೆಯ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

'ಅಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್' 

ಕೋವಿಡ್ -19 ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದು ಕೊಳ್ಳಲು ಉಡುಪಿ ಜಿಲ್ಲೆಯಲ್ಲಿ ಒಟ್ಟು 18 ಮಂದಿಯ ಫ್ಲೈಯಿಂಗ್ ಸ್ಕ್ವಾಡ್ ಸ್ಥಾಪಿಸಲಾಗಿದೆ. ಅದರಲ್ಲಿರುವ ಉಡುಪಿ ನಗರಸಭೆ ವ್ಯಾಪ್ತಿಯ ಮೂವರು ಅಧಿಕಾರಿಗಳಿಗೆ ಕೋರ್ಟ್ ಆವರಣದಲ್ಲಿ ನಡೆಯುತ್ತಿರುವ ಭೋಜನ ಕೂಟದ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ ಅವರು ಸ್ಥಳಕ್ಕೆ ಹೋಗದೆ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಈ ಸಂಬಂಧ ಎಪಿಡಮಿಕ್ ಆ್ಯಕ್ಟ್‌ನಡಿಯಲ್ಲಿ ಪೌರಾಯುಕ್ತರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ. ಅವರು ನೀಡುವ ವರದಿಯ ನಂತರ ಅಧಿಕಾರಿಗಳ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು. ಅದೇ ರೀತಿ ಕಾನೂನು ಉಲ್ಲಂಘನೆ ಕಂಡು ಬಂದರೆ ಆಯೋಜಕರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News