ದ.ಕ.ಜಿಲ್ಲೆಯಲ್ಲಿ 485 ಮಂದಿಗೆ ಕೊರೋನ ಪಾಸಿಟಿವ್
ಮಂಗಳೂರು, ಎ.23: ದ.ಕ.ಜಿಲ್ಲೆಯಲ್ಲಿ ಶುಕ್ರವಾರ 485 ಕೊರೋನ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 40,203 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದೆ.
ಶುಕ್ರವಾರ 123 ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳುವುದರೊಂದಿಗೆ ಈವರೆಗೆ 36,268 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಂತಾಗಿದೆ. ಅಲ್ಲದೆ ಒಟ್ಟು 745 ಮಂದಿ ಕೊರೋನದಿಂದ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 7,07,544 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಆ ಪೈಕಿ 6,67,341 ಮಂದಿಯ ವರದಿ ನೆಗೆಟಿವ್ ಬಂದಿದೆ. ಅಲ್ಲದೆ 3,187 ಸಕ್ರಿಯ ಪ್ರಕರಣವಿದೆ.
ದಂಡ: ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದುದಕ್ಕೆ ಸಂಬಂಧಿಸಿ ಈವರೆಗೆ 48,169 ಪ್ರಕರಣ ದಾಖಲಿಸಿ 50,15,330 ರೂ. ದಂಡ ವಸೂಲಿ ಮಾಡಲಾಗಿದೆ.
ಕೊರೋನ ಏರಿಕೆಯಾಗುತ್ತಿದ್ದಂತೆಯೇ ಕಂಟೈನ್ಮೆಂಟ್ ವಲಯಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಶುಕ್ರವಾರ 4 ಕಂಟೈನ್ಮೆಂಟ್ ವಲಯವನ್ನು ಘೋಷಿಸುವುದರೊಂದಿಗೆ ಜಿಲ್ಲೆಯಲ್ಲಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 30ಕ್ಕೇರಿದೆ. ಬಜ್ಪೆ ಕೆಂಜಾರಿನ ಕಾಲೇಜು ಹಾಸ್ಟೆಲ್‌ನ 21 ವಿದ್ಯಾರ್ಥಿಗಳು, ಮೂಲ್ಕಿಯ ನರ್ಸಿಂಗ್ ಕಾಲೇಜಿನ 5 ವಿದ್ಯಾರ್ಥಿಗಳು, ಕೊಣಾಜೆಯ ಒಂದು ಮನೆಯ 5 ಸದಸ್ಯರು ಹಾಗೂ ಸುಬ್ರಹ್ಮಣ್ಯದ ಹೋಟೆಲ್‌ನಲ್ಲಿರುವ ಐದು ಮಂದಿಗೆ ಪಾಸಿಟಿವ್ ಆದದ್ದರಿಂದ ಈ ನಾಲ್ಕು ಕಡೆಯಲ್ಲಿ ಕಂಟೈನ್ಮೆಂಟ್ ವಲಯ ಘೋಷಿಸಲ್ಪಟ್ಟಿವೆ.
ಜಿಲ್ಲೆಯಲ್ಲಿ ಶುಕ್ರವಾರ 11,655 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಜಿಲ್ಲೆಯ ಕೆಲವು ಕಡೆಗಳಲ್ಲಿ ಗುರುವಾರ ಮತ್ತು ಶುಕ್ರವಾರ ಲಸಿಕೆ ವಿತರಣೆಯಲ್ಲಿ ವ್ಯತ್ಯಯ ಕಾಣಿಸಿಕೊಂಡಿತ್ತು. ಹಾಗಾಗಿ ಕೆಲವು ಮಂದಿ ಲಸಿಕೆ ಪಡೆಯಲು ಆಸ್ಪತ್ರೆ ಆಗಮಿಸಿದ್ದರೂ ಕೂಡ ಲಸಿಕೆ ಸಿಗದೆ ನಿರಾಶೆಯಿಂದ ಮರಳಿದರು. ಲಸಿಕೆ ಕೊರತೆ ನೀಗಿಸಲು ಶನಿವಾರ ಮತ್ತಷ್ಟು ಲಸಿಕೆಯು ಬೆಂಗಳೂರಿನಿಂದ ಪೂರೈಕೆಯಾಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.