ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಸೈಕಲ್ ಟ್ರಾಕ್ ನಿರ್ಮಾಣ ಶ್ಲಾಘನೀಯ: ಎಮ್. ಎಸ್. ಮುತ್ತಲಿಬ್
ಮಂಗಳೂರು, ಎ. 23: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿ ಯಲ್ಲಿ, ಸೈಕಲ್ ಟ್ರಾಕ್ ನಿರ್ಮಾಣಕ್ಕೆ ಮುಂದಾಗಿರುವ ಸರಕಾರದ ನಿರ್ಣಯವು ಹರ್ಷದಾಯಕ ಕ್ರಮವೆಂದು ನಗರದ ಪ್ರಸಿದ್ಧ ತಾಜ್ ಸೈಕಲ್ ಸಂಸ್ಥೆಗಳ ಮಾಲಕ ಎಮ್. ಎಸ್. ಮುತ್ತಲಿಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದು ಮಂಗಳೂರು ನಗರವನ್ನು ಸ್ಮಾರ್ಟ್ ಸಿಟಿಯಾಗಿ ಪರಿವರ್ತಿಸುವಲ್ಲಿ ಒಂದು ಉತ್ತಮ ಹೆಜ್ಜೆಯಾಗಿರುವುದಲ್ಲದೆ, ಮಂಗಳೂರಿನ ಸೈಕ್ಲರ್ಸ್ ಗಳ ಮನವಿಗೆ ದೊರೆತ ಮಾನ್ಯತೆಯೂ ಆಗಿದೆ, ನಗರದಲ್ಲಿ ಈಗಾಗಲೇ ಸೈಕಲ್ ತುಳಿಯುವ ಜನಗಳು ಬಹುತೇಕ ಕಡಿಮೆಗೊಂಡಿರುವುದರಲ್ಲಿ, ಸೈಕಲ್ ಗಳಿಗೆ ಪ್ರತ್ಯೇಕ ಟ್ರಾಕ್ ಗಳಿಲ್ಲದಿರುವುದೂ ಒಂದು ಕಾರಣವಾಗಿದೆ. ಯಾಕೆಂದರೆ, ಇಂದು ಮಂಗಳೂರು ಮಹಾನಗರದ ಪ್ರಮುಖ ರಸ್ತೆಗಳೆಂದು ಮಾತ್ರವಲ್ಲದೆ ಸಿಟಿ ಬಸ್ಸುಗಳ ಮತ್ತು ಇತರ ವಾಹನಗಳ ದಟ್ಟಣೆಯಿರುವ ಯಾವುದೇ ಒಳ ರಸ್ತೆಗಳಲ್ಲಿ ಕೂಡಾ ಸೈಕಲಿಂಗ್ ಅಪಾಯಕಾರಿಯೆಂಬಂತಹ ಸ್ಥಿತಿಯಲ್ಲಿ ವಾಹನಗಳ ವೇಗದ ಓಡಾಟ ಸಾಮಾನ್ಯವಾಗಿದೆ. ಇದರಿಂದಾಗಿ ಬೆಳಗಿನ ಜಾವ ಮತ್ತು ಸಂಧ್ಯಾ ಸಮಯದಲ್ಲಿ ವ್ಯಾಯಾಮಕ್ಕಾಗಿ ಸೈಕಲ್ ಓಡಿಸುವವರೂ ಹಿಂದೇಟು ಹಾಕುವಂತಹ ಸನ್ನಿವೇಶವೆದುರಾಗಿದ್ದು, ಮಹಾ ನಗರದೆಲ್ಲೆಡೆ, ಪ್ಲಾಟ್ ಗಳಲ್ಲಿ ವಾಸಿಸುವ ಜನರು ತಮ್ಮ ಮಕ್ಕಳು ಸೈಕಲ್ ತೆಗೆದು ಪ್ಲಾಟ್ ಆವರಣದ ಹೊರಗೆ ಹೋಗದಂತೆ ಎಚ್ಚರಿಕೆವಹಿಸುತ್ತಿದ್ದಾರೆ ಹೀಗೆ ಮಕ್ಕಳು ತಮ್ಮ ಮುಕ್ತ ಆಟೋಟ ಮನರಂಜನೆಯಿಂದಲೂ, ಅವಕಾಶ ವಂಚಿತರಾಗುತ್ತಿದ್ದಾರೆ, ಈ ನಿಟ್ಟಿನಲ್ಲಿ ಸದ್ಯ ಸುಮಾರು 6.4 ಕೋಟಿ ರೂಪಾಯಿ ವೆಚ್ಚದಲ್ಲಿ ಕನಿಷ್ಠ 12 ಕಿ. ಮೀ. ಸೈಕಲ್ ಟ್ರಾಕ್ ನಿರ್ಮಿಸಲು ನೀಡಿದ ಸರ್ಕಾರದ ಆದೇಶ ಸ್ವಾಗತಾರ್ಹ. ಇದಕ್ಕಾಗಿ ಮುತುವರ್ಜಿವಹಿಸಿದ ಶಾಸಕ ವೇದವ್ಯಾಸ ಕಾಮತ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದನಾರ್ಹರೆಂದು ಹೇಳಿದರು.
ನಮ್ಮ ನಗರವೂ ಬೆಂಗಳೂರು, ಚೆನ್ನೈ ಮಹಾನಗರಗಳಂತೆ ಬೈಸಿಕಲ್ ಟ್ರಾಕ್ ಹೊಂದಿರುವ ಮಹಾನಗರಗಳ ಸಾಲಿಗೆ ಸೇರಲಿದೆಯೆಂದು ಸುಮಾರು 94 ವರ್ಷಗಳಿಂದ, ತನ್ನ ತಂದೆಯ ಕಾಲದಿಂದಲೇ ಅಸ್ತಿತ್ವ ಹೊಂದಿರುವ, 1927 ರಲ್ಲಿ ಸ್ಥಾಪನೆಯಾದ ಜಿಲ್ಲೆಯ ಹೆಸರಾಂತ ತಾಜ್ ಸೈಕಲ್ ಸಮೂಹ ಸಂಸ್ಥೆಗಳ ಮಾಲಕ ಎಮ್. ಎಸ್. ಮುತ್ತಲಿಬ್ ಹೇಳಿದರು.