×
Ad

ಮುಂಬೈ : ಟ್ವಿಟರ್‌ನಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದ ಆರೋಪದಲ್ಲಿ ಬಿಜೆಪಿ ವಕ್ತಾರ ಸೆರೆ

Update: 2021-04-24 10:27 IST
(Photo- Facebook)

ಮುಂಬೈ: ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಜೀವಂತ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ನಡೆಸಿದ್ದಾರೆ ಎಂದು ಟ್ವಿಟರ್‌ನಲ್ಲಿ ವದಂತಿ ಹಬ್ಬಿಸಿ ಮಾನಹಾನಿ ಮಾಡಿದ ಆರೋಪದಲ್ಲಿ ಬಿಜೆಪಿ ನಗರ ಘಟಕದ ವಕ್ತಾರ ಸುರೇಶ್ ನಖುಲಾ ಎಂಬಾತನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಆದರೆ ಬಳಿಕ ಆರೋಪಿಯಿಂದ ಹೇಳಿಕೆ ಪಡೆದು ಬಿಡುಗಡೆ ಮಾಡಲಾಯಿತು.

ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಜೀವಂತ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರ ನಡೆಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಘಟ್ಕೋಪರ್ ನಿವಾಸಿಯಾಗಿರುವ ಸುರೇಶ್ ನಖುಲಾ ವೀಡಿಯೊ ಟ್ವೀಟ್ ಮಾಡಿದ್ದ. "ಇದು ಆಘಾತಕಾರಿ. ಜೀವಂತ ವ್ಯಕ್ತಿಯೊಬ್ಬರನ್ನು ಬಿಎಂಸಿ ಅಧಿಕಾರಿಗಳು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಮಹಾವಸೂಲಿ ಸರ್ಕಾರಕ್ಕೆ ಸ್ಮಶಾನಗಳಿಂದಲೂ ಮಹಾವಸೂಲಿ ಟಾರ್ಗೆಟ್ ಇರಬೇಕು" ಎಂದು ನಖುಲಾ ಟ್ವೀಟ್ ಮಾಡಲಾಗಿತ್ತು.

ಬಿಎಂಸಿ ಅಧಿಕಾರಿಗಳು ಬಿಜೆಪಿ ವಕ್ತಾರನನ್ನು ಸಂಪರ್ಕಿಸಿ ಸ್ಥಳ ಮತ್ತು ಇತರ ವಿವರ ಕೇಳಿದಾಗ ತೃಪ್ತಿಕರವಾದ ಉತ್ತರ ಬರಲಿಲ್ಲ. ಆದ್ದರಿಂದ ನಗರದ ಭೋಯಿವಾಡ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದರು. ಬಳಿಕ ತನ್ನ ಪ್ರಮಾದದ ಅರಿವಾಗಿ ಆರೋಪಿ ಕ್ಷಮೆ ಯಾಚಿಸಿದ. "ನಾನು ಜೀವಂತ ವ್ಯಕ್ತಿಯೊಬ್ಬನನ್ನು ಸ್ಮಶಾನಕ್ಕೆ ಒಯ್ಯುವ 20/04/2021ರ ವಿಡಿಯೊ ಅಪ್‌ಲೋಡ್ ಮಾಡಿದ್ದೆ. ಆದರೆ ಆ ಘಟನೆ ಎಲ್ಲಿ ನಡೆದಿದೆ ಎನ್ನುವ ಬಗ್ಗೆ ನನಗೆ ಅರಿವು ಇರಲಿಲ್ಲ. ಇದನ್ನು ದೃಢಪಡಿಸಲು ಸಾಧ್ಯವಾಗಲಿಲ್ಲ. ನನಗೆ ತೀವ್ರ ಆಘಾತವಾಗಿ ಅಧಿಕಾರಿಗಳನ್ನು ಎಚ್ಚರಿಸುವ ಉದ್ದೇಶದಿಂದ ಟ್ವೀಟ್ ಮಾಡಿದ್ದೆ. ಸಾರ್ವಜನಿಕರಲ್ಲಿ ಗಲಿಬಿಲಿ ಮೂಡಿಸುವ ಉದ್ದೇಶ ತಮಗೆ ಇರಲಿಲ್ಲ ಎಂದು ಟ್ವೀಟ್ ಮಾಡಿದ ಬಳಿಕ ಪೊಲೀಸರು ಆರೋಪಿಯನ್ನು ಬಿಡುಗಡೆ ಮಾಡಿದರು. ಈ ಮಧ್ಯೆ ಆರೋಪಿ, ಮಹಾರಾಷ್ಟ್ರ ಸರ್ಕಾರ ನನ್ನನ್ನು ಗುರಿ ಮಾಡಿ ವಿಚಾರಣೆಗಾಗಿ ಹಲವು ಮಂದಿ ಅಧಿಕಾರಿಗಳನ್ನು ಕಳುಹಿಸುತ್ತಿದೆ ಎಂದೂ ಟ್ವೀಟ್ ಮಾಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News