×
Ad

ಮಾಸ್ಕ್ ಧರಿಸದೆ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಡುಪಿ ಜಿಲ್ಲಾಧಿಕಾರಿ ವಿರುದ್ಧ ವ್ಯಾಪಕ ಆಕ್ರೋಶ

Update: 2021-04-24 12:36 IST

ಉಡುಪಿ, ಎ.24: ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿಯ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಸ್ಕ್ ಧರಿಸದೆ ಭಾಗವಹಿಸಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೋವಿಡ್-19 ನಿಯಮ ಉಲ್ಲಂಘಿಸಿದ ಜಿಲ್ಲಾಧಿಕಾರಿಗಳ ವಿರುದ್ಧ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ.

ಎ.25ರಂದು ಉಡುಪಿಯಲ್ಲಿ ನಡೆಯಲಿರುವ ಹೆಚ್ಚುವರಿ ಎಸ್ಪಿಯ ಮಗಳ ಮದುವೆಯ ಮೆಹಂದಿ ಕಾರ್ಯಕ್ರಮವು ಎ.23ರಂದು ರಾತ್ರಿ ಉಡುಪಿಯ ಅವರ ನಿವಾಸದಲ್ಲಿ ಆಯೋಜಿಸಲಾಗಿತ್ತು. ಅದರಲ್ಲಿ ಜಿಲ್ಲಾಧಿಕಾರಿ ಕುಟುಂಬ ಸಮೇತರಾಗಿ ಭಾಗವಹಿಸಿದ್ದು, ವೇದಿಕೆಯಲ್ಲಿ ಮದುಮಗಳ ಜೊತೆ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಎಸ್ಪಿ ಮಾಸ್ಕ್ ಧರಿಸದೆ ಸುರಕ್ಷಿತ ಅಂತರ ಕಾಪಾಡದೆ ನಿಂತಿರುವುದು ಫೋಟೊದಲ್ಲಿ ಕಂಡುಬಂದಿದೆ.

ಸರಕಾರದ ಮಾರ್ಗಸೂಚಿ ಪ್ರಕಾರ ಮದುವೆಯಲ್ಲಿ 50 ಮಂದಿ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ವಧು ಮತ್ತು ವರರ ಕಡೆಯವರು ತಲಾ 25ರಂತೆ ಒಟ್ಟು 50 ಮಂದಿಯ ಪಟ್ಟಿಯನ್ನು ಅನುಮತಿ ಪಡೆಯುವಾಗ ತಾಲೂಕು ಕಚೇರಿಗೆ ಸಲ್ಲಿಸಬೇಕು ಎಂಬ ನಿಯಮ ಕೂಡ ಇದೆ. ಆದರೆ ಮೆಹಂದಿ ಕಾರ್ಯಕ್ರಮ ನಡೆಸುವ ಬಗ್ಗೆ ಯಾವುದೇ ಉಲ್ಲೇಖ ಇಲ್ಲ.

ಆದರೂ ಅವಕಾಶ ಇಲ್ಲದ ಮೆಹಂದಿ ಕಾರ್ಯಕ್ರಮವನ್ನು ತಡೆಯಬೇಕಾದ ಡಿಸಿ, ಅದರಲ್ಲಿ ಭಾಗವಹಿಸಿರುವುದೇ ತಪ್ಪು ಎಂಬ ಅಭಿಪ್ರಾಯ ಕೇಳಿ ಬರುತ್ತಿವೆ. ಆ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿರುವ ಹಾಗೂ ಮದುಮಗಳನ್ನು ನೃತ್ಯ ತಂಡ ಮೆರವಣಿಗೆಯಲ್ಲಿ ಕರೆದು ಕೊಂಡು ಬರುತ್ತಿರುವ ವಿಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ಸಂತೆಕಟ್ಟೆಯಲ್ಲಿ ಬಸ್‌ನಲ್ಲಿ ನಿಂತು ಪ್ರಯಾಣಿಸಿದ ವಿದ್ಯಾರ್ಥಿನಿ ಯರನ್ನು ಕೆಳಗಿಸುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಜಿಲ್ಲಾಧಿಕಾರಿ, ಇದೀಗ ಮತ್ತೊಂದು ವಿವಾದ ಮೈಮೇಲೆ ಹಾಕಿಕೊಂಡಿದ್ದಾರೆ. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಡಿಸಿಯನ್ನು ಅಮಾನತುಗೊಳಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಟಿಟ್ವರ್‌ನಲ್ಲಿಲ್ಲೂ ಡಿಸಿ ವಿರುದ್ಧ ಹ್ಯಾಶ್ ಟ್ಯಾಗ್ ಅಭಿಯಾನದ ಕೂಗು ಕೇಳಿಬರುತ್ತಿವೆ.

ಡಿಸಿ ಅಮಾನತಿಗೆ ಒತ್ತಾಯ

ಪೊಲೀಸ್ ಅಧಿಕಾರಿಯೊಬ್ಬರ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಸುರಕ್ಷಿತ ಅಂತರವೂ ಇಲ್ಲದೆ, ಮಾಸ್ಕ್ ಹಾಕದೆ ನಗುತ್ತಾ ನಿಂತಿರುವ ಪರಿ ನೋಡಿ. ಕಾನೂನು, ಶಿಕ್ಷೆ, ಬೈಗುಳ, ಒದೆ ಎಲ್ಲ ಸಾಮಾನ್ಯ ಜನರಿಗೆ ಮಾತ್ರ ಅಲ್ಲವೇ ಜಿಲ್ಲಾಧಿಕಾರಿಗಳೇ? ಉಡುಪಿ ಡಿಸಿ ಜಗದೀಶ್, ಶೇಮ್ ಆನ್ ಯೂ. ಅಂದ ಹಾಗೆ ಈ ಮದುವೆಗೆ ಹೋಗುವ ಅತಿಥಿಗಳ ಆಧಾರ್ ಕಾರ್ಡ್ ನೀಡಿದ ಪಾಸ್ ಪಟ್ಟಿಯಲ್ಲಿ ಜಿಲ್ಲಾಧಿಕಾರಿಗಳ ಹೆಸರು ಇತ್ತೇ ? ಉತ್ತರಿಸಲೇಬೇಕು ಡಿಸಿ ಸಾಹೇಬರು’ ಎಂದು ಪ್ರಗತಿಪರ ಚಿಂತಕ ಶಶಿಧರ್ ಹೆಮ್ಮಾಡಿ ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ನಡೆಯುತ್ತಿರುವ ‘ಶೇಮ್ ಆನ್ ಸಿಸ್ಟಮ್ ಡಿಸಿ ಉಡುಪಿ’ ಎಂಬ ಹ್ಯಾಶ್ ಟ್ಯಾಗ್ ಅಭಿಯಾನದಲ್ಲಿ ‘ಅದೇಷ್ಟೊ ಬಡ ಕುಟುಂಬಗಳ ಮನೇಲಿ ಇಂದು ನಡೆಯಬೇಕಿದ್ದ ಮೆಹಂದಿ ಮದುವೆಗಳೆಲ್ಲ ಕೇವಲ ಬಡವರ ಮೇಲೆ ಅಪ್ಲೈ ಆಗುವ ಕಾನೂನಿಗೆ ಹೆದರಿ ನಿಂತಿರಬಹುದು. ಆದರೆ ಡಿಸಿ ಉಡುಪಿ ಅವರು ಮಾತ್ರ ಮೆಹಂದಿಗೆ ಮಾಸ್ಕ್ ಮತ್ತು ಸುರಕ್ಷಿತ ಅಂತರ ಪಾಲಿಸದೆ ಭಾಗವಹಿಸಿದ್ದು ಹೀಗೆ... ಇದು ನಮ್ಮ ವ್ಯವಸ್ಥೆ’ ಎಂಬುದಾಗಿ ಟೀಕಿಸಲಾಗಿದೆ.

‘ಮಾರ್ಗಸೂಚಿ ಉಲ್ಲಂಘಿಸಿ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಗಂಭೀರ ಕರ್ತವ್ಯ ಲೋಪ ಎಸಗಿದ್ದಾರೆ. ಸ್ವತಹ ತಾವೇ ವಿಧಿಸಿದ ನಿಯಮಗಳನ್ನು ಉಲ್ಲಂಘಿಸುವುದು ನಾಚಿಕೆಗೇಡು. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸರಿಯಾದ ತನಿಖೆ ನಡೆಸಬೇಕು. ವಿಷಯ ಹೌದು ಅಂತಾದರೆ ಜಿಲ್ಲಾಧಿಕಾರಿ ಜಗದೀಶ್ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ ಫೇಸ್‌ಬುಕ್‌ನಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News