ಕೋವಿಡ್‌ ಲಸಿಕೆ ತಯಾರಿಸಲು ಭಾರತಕ್ಕೆ ಅಗತ್ಯ ಕಚ್ಛಾ ವಸ್ತುಗಳ ಪೂರೈಕೆ ಮಾಡುವುದಿಲ್ಲವೆಂದ ಅಮೆರಿಕ: ವರದಿ

Update: 2021-04-24 09:31 GMT

ಹೊಸದಿಲ್ಲಿ: ದೈನಂದಿನ ಕೋವಿಡ್-19 ಪ್ರಕರಣಗಳಲ್ಲಿ ಜಾಗತಿಕ ದಾಖಲೆಯನ್ನೇ ಸೃಷ್ಟಿಸುತ್ತಿರುವ  ಭಾರತ ಕೋವಿಡ್ 2ನೇ ಅಲೆಯಿಂದ ತತ್ತರಗೊಂಡಿರುವ ನಡುವೆ ನೆರೆಯ ಪಾಕಿಸ್ತಾನದ ಸಮಾಜ ಸೇವಾ ಸಂಘಟನೆಯೊಂದರ  ಸಹಿತ ಹಲವು ದೇಶಗಳು ಭಾರತಕ್ಕೆ ಸಹಾಯಹಸ್ತ ಚಾಚಲು ಮುಂದೆ ಬಂದಿವೆ.

ಈ ನಡುವೆ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದನೆಗಾಗಿ ಪುಣೆ ಮೂಲದ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಅಗತ್ಯವಿರುವ ಕಚ್ಛಾವಸ್ತುಗಳ ರಫ್ತಿನ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸಲು ಅಮೆರಿಕಾ ನಿರಾಕರಿಸಿದೆ.

ನಿಷೇಧ ವಾಪಸ್ ಪಡೆಯುವಂತೆ ಸೀರಮ್ ಇನ್‍ಸ್ಟಿಟ್ಯೂಟ್‍ನ ಸಿಇಒ ಅದಾರ್ ಪೂನಾವಾಲ ಮಾಡಿರುವ ಮನವಿಗೆ ಅಮೆರಿಕಾದ ಸ್ಟೇಟ್ ಡಿಪಾರ್ಟ್‍ಮೆಂಟ್ ವಕ್ತಾರರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆನ್ನಲಾಗಿದೆ. "ಅಮೆರಿಕಾದ ಜನರ ಅಗತ್ಯತೆಗಳನ್ನು ನೋಡಿಕೊಳ್ಳುವುದು ಬೈಡೆನ್ ಆಡಳಿತದ ಮೊದಲ ಆದ್ಯತೆ" ಎಂದು ಅವರು ತಿಳಿಸಿದ್ದಾರೆಂಬ ಮಾಹಿತಿಯಿದೆ.

ಈ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ರಾಸಾಯನಿಕ ಸಚಿವ ಮನ್ಸುಖ್ ಮಾಂಡವಿಯ ಹಾಗೂ ಈ ಸಚಿವಾಲಯಗಳ ಹಿರಿಯ ಅಧಿಕಾರಿಗಳು  ಅದಾರ್ ಪೂನಾವಾಲ ಸಹಿತ ಭಾರತದ ಲಸಿಕೆ ತಯಾರಕರು ಹಾಗೂ  ಅಮೆರಿಕಾ, ಜರ್ಮನಿ ಮತ್ತು ಯುರೋಪಿಯನ್ ಯೂನಿಯನ್‍ನ ಭಾರತದ ರಾಯಭಾರಿಗಳು ಜತೆ ಸೇರಿ  ಭಾರತದಲ್ಲಿ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಮುಂದೆ ಯಾವ ಕ್ರಮ ಕೈಗೊಳ್ಳಬೇಕೆನ್ನುವ ಕುರಿತು ಚರ್ಚಿಸುತ್ತಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News