ವೀಕೆಂಡ್ ಕರ್ಫ್ಯೂ : ಕಾಪು ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ
ಕಾಪು: ರಾಜ್ಯ ಸರ್ಕಾರದ ಆದೇಶದಂತೆ ವೀಕೆಂಡ್ ಕರ್ಫ್ಯೂಗೆ ಕಾಪು ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾಪು, ಪಡುಬಿದ್ರಿ ಠಾಣೆ ವ್ಯಾಪ್ತಿಯಲ್ಲಿ 10ಗಂಟೆಯವರೆಗೆ ತರಕಾರಿ, ಜಿನಸು ಹಾಗೂ ಇತರ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದವು. 10ಗಂಟೆಯಿಂದ ಎಲ್ಲಾ ಅಂಗಡಿಗಳು ಮುಚ್ಚಿದವು. ಕೆಲವೊಂದು ಸಮಯ ಮೀರಿ ತೆರೆದಿರುವ ಅಂಗಡಿಗಳನ್ನು ಪೊಲೀಸರು ಬಂದ್ ಮಾಡಿಸಿದರು.
ಉಡುಪಿ ಜಿಲ್ಲೆಯ ಗಡಿ ಪ್ರದೇಶವಾದ ಹೆಜಮಾಡಿಯಲ್ಲಿ ಪೊಲೀಸ್ ತಪಾಸಣೆ ಕೇಂದ್ರದಲ್ಲಿ ಪೊಲೀಸರು ಮಂಗಳೂರು ಕಡೆಯಿಂದ ಬರುವ ವಾಹನಗಳಲ್ಲಿರುವ ಪ್ರಯಾಣಿಕರ ದಾಖಲೆಗಳನ್ನು ಪರಿಶೀಲಿಸಿ ಬಿಡಲಾಗುತಿತ್ತು. ವಿನಾಃಕಾರಣ ಓಡಾಡುವ ವಾಹನಗಳನ್ನು ತರಾಟೆಗೆ ತೆಗೆದುಕೊಂಡು ಅವರನ್ನು ವಾಪಾಸು ಕಳುಹಿಸಲಾಯಿತು.
ಹೆಚ್ಚಿನ ವಾಹನ ಓಡಾಟಗಳು ಇರದೆ ರಾಷ್ಟ್ರೀಯ ಹೆದ್ದಾರಿ 66 ಬಿಕೋ ಎನ್ನುತಿತ್ತು. ಸರಕು ಸಾಗಾಟದ ವಾಹನಗಳು ಮಾತ್ರ ಓಡಾಟ ನಡೆಸುತಿತ್ತು.
ಪಡುಬಿದ್ರಿ ಠಾಣಾ ವ್ಯಾಪ್ತಿಯ ಫಲಿಮಾರು, ಮುದರಂಗಡಿ, ಎಲ್ಲೂರು, ಹೆಜಮಾಡಿ, ಎರ್ಮಾಳು, ಉಚ್ಚಿಲದಲ್ಲಿ ಜನರ ಓಡಾಟ ಕಡಿಮೆಯಾಗಿತ್ತು. 10ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನರು ತೊಡಗಿದ್ದರು. ಕಾಪು ಠಾಣಾ ವ್ಯಾಪ್ತಿಯ ಮಲ್ಲಾರು, ಮೂಳೂರು, ಮಜೂರು, ಫಕೀರ್ಣಕಟ್ಟೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.