×
Ad

ದ.ಕ.ಜಿಲ್ಲೆಯಲ್ಲಿ ಕೋವಿಡ್‌ಗೆ ಮತ್ತೆ ಇಬ್ಬರು ಬಲಿ; 517 ಮಂದಿಗೆ ಕೊರೋನ ಪಾಸಿಟಿವ್

Update: 2021-04-24 22:14 IST

ಮಂಗಳೂರು, ಎ.24: ದ.ಕ.ಜಿಲ್ಲೆಯಲ್ಲಿ ಶನಿವಾರ ಕೋವಿಡ್‌ಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ಗೆ ಮೃತಪಟ್ಟವರ ಸಂಖ್ಯೆ 747ಕ್ಕೇರಿದೆ. ಬೆಂಗಳೂರು ಮೂಲದ ಮಹಿಳೆ ಮತ್ತು ಜಿಲ್ಲೆಯ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ನಗರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಶನಿವಾರ 517 ಕೊರೋನ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ 40,720 ಪಾಸಿಟಿವ್ ಪ್ರಕರಣಗಳು ಕಂಡು ಬಂದಂತಾಗಿದೆ. ಜಿಲ್ಲೆಯಲ್ಲಿ ಈವರೆಗೆ 7,12,153 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಆ ಪೈಕಿ 6,71,433 ಮಂದಿಯ ವರದಿ ನೆಗೆಟಿವ್ ಬಂದಿದೆ. ಅಲ್ಲದೆ 3,577 ಸಕ್ರಿಯ ಪ್ರಕರಣವಿದೆ.

ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದರೂ ಕೂಡ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಶನಿವಾರ ಆಸ್ಪತ್ರೆಯಲ್ಲಿರುವ 642 ಮಂದಿಯಲ್ಲಿ 128 ಮಂದಿ ಬಿಡುಗಡೆಯಾಗಿದ್ದಾರೆ. ಹಾಗಾಗಿ ಈವರೆಗೆ ಚಿಕಿತ್ಸೆ ಪಡೆದು ಮನೆಗೆ ಮರಳಿದವ ಸಂಖ್ಯೆ 36,396ಕ್ಕೇರಿದೆ. ಇನ್ನು 514 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ 2,548 ಮಂದಿ ಹೋಮ್ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

ದಂಡ: ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದುದಕ್ಕೆ ಸಂಬಂಧಿಸಿ ಈವರೆಗೆ 48,511ಪ್ರಕರಣ ದಾಖಲಿಸಿ 50,49,530 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಜಿಲ್ಲೆಯಲ್ಲಿ ಮತ್ತೆ 3 ಕಂಟೈನ್ಮೆಂಟ್ ವಲಯವನ್ನು ಘೋಷಿಸುವುದರೊಂದಿಗೆ ಜಿಲ್ಲೆಯಲ್ಲಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 33ಕ್ಕೇರಿದೆ. ಸುಳ್ಯ ಮಂಡೇಕೋಲಿನ ಮನೆಯೊಂದರ 6, ಕದ್ರಿಯ ಅಪಾರ್ಟ್‌ಮೆಂಟ್‌ನಲ್ಲಿ 6, ಕೋಡಿಯಲ್‌ಬೈಲ್ ಭಗವತಿ ನಗರದ ಮನೆಯೊಂದರ 5 ಮಂದಿಯಲ್ಲಿ ಕೊರೋನ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಮೂರನ್ನು ಕೂಡ ಕಂಟೈನ್ಮೆಂಟ್ ವಲಯವನ್ನಾಗಿ ಮಾಡಲಾಗಿದೆ.

ಶನಿವಾರ ದ.ಕ. ಜಿಲ್ಲೆಗೆ 10 ಸಾವಿರ ಡೋಸ್ ಕೋವಿಶೀಲ್ಡ್ ಲಸಿಕೆ ಬಂದಿದೆ. ಕಳೆದ ಎರಡು ದಿನಗಳಿಂದ ಖಾಸಗಿ ಸಹಿತ ಸರಕಾರಿ ಆಸ್ಪತ್ರೆಗಳಲ್ಲಿ ಕೂಡ ಲಸಿಕೆಯ ಸಮಸ್ಯೆ ಕಾಣಿಸಿಕೊಂಡಿತ್ತು. ಶನಿವಾರ ಕೋವಿಶಿಲ್ಡ್ ಮಾತ್ರ ಬಂದಿತ್ತು. ಇನ್ನು ಕೋವ್ಯಾಕ್ಸಿನ್ ಬಂದಿಲ್ಲ. ಸೋಮವಾರ ಇನ್ನಷ್ಟು ಲಸಿಕೆ ಬರುವ ಸಾಧ್ಯತೆಯಿದೆ. ವೀಕೆಂಡ್ ಕರ್ಫ್ಯೂ ಇದ್ದ ಕಾರಣ ಶನಿವಾರ ಲಸಿಕೆಯ ಪ್ರಮಾಣದಲ್ಲಿ ತುಂಬಾ ಕುಸಿತ ಕಂಡು ಬಂದಿದೆ. ಶನಿವಾರ 3,483 ಮಂದಿ ಮಾತ್ರ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News