ನಾಪತ್ತೆಯಾಗಿದ್ದ ಸಬ್‌ಮರೀನ್ ಮುಳುಗಿದೆ: ಇಂಡೋನೇಶ್ಯದ ನೌಕಾಪಡೆ ಮುಖ್ಯಸ್ಥ ಘೋಷಣೆ

Update: 2021-04-24 17:43 GMT

ಜಕಾರ್ತ (ಇಂಡೋನೇಶ್ಯ), ಎ. 24: ಬಾಲಿ ದ್ವೀಪದ ಕರಾವಳಿಯಲ್ಲಿ ನಾಪತ್ತೆಯಾಗಿರುವ ಇಂಡೋನೇಶ್ಯದ ಸಬ್‌ಮರೀನ್ ಮುಳುಗಿದೆ ಎಂದು ದೇಶದ ನೌಕಾಪಡೆ ಶನಿವಾರ ತಿಳಿಸಿದೆ. ಇದರೊಂದಿಗೆ ಸಬ್‌ಮರೀನ್‌ನಲ್ಲಿದ್ದ 53 ಸಿಬ್ಬಂದಿ ಜೀವಂತವಾಗಿ ಹೊರಬರಬಹುದು ಎನ್ನುವ ನಿರೀಕ್ಷೆಗಳು ಹುಸಿಯಾಗಿವೆ.

ಸಬ್‌ಮರೀನ್ ಕೆಆರ್‌ಐ ನಂಗಾಲ 402ರ ಕೆಲವು ಅವಶೇಷಗಳನ್ನು ಶೋಧ ತಂಡಗಳು ಪತ್ತೆಹಚ್ಚಿವೆ ಎಂದು ನೌಕಾಪಡೆ ಮುಖ್ಯಸ್ಥ ತಿಳಿಸಿದರು. ಪತ್ತೆಯಾಗಿರುವ ವಸ್ತುಗಳಲ್ಲಿ ಸಬ್‌ಮರೀನ್‌ನ ಒಳಗಿನ ಕೆಲವು ವಸ್ತುಗಳಿವೆ. ಅದರ ಆಮ್ಲಜನಕ ಪೂರೈಕೆಯು ಈಗಾಗಲೇ ಮುಗಿದಿರಬಹುದೆಂದು ಭಾವಿಸಲಾಗಿದೆ.

ಬುಧವಾರ ನಾಪತ್ತೆಯಾಗಿರುವ ಸಬ್‌ಮರೀನ್‌ಗಾಗಿ ನೂರಾರು ಸೇನಾ ಸಿಬ್ಬಂದಿ ಯುದ್ಧನೌಕೆಗಳು, ವಿಮಾನಗಳ ಮೂಲಕ ಶೋಧ ನಡೆಸುತ್ತಿದ್ದರು. ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಬಳಿಕ, ಅದರಲ್ಲಿದ್ದ ಆಮ್ಲಜನಕ ಕೇವಲ ಮೂರು ದಿನಗಳಿಗೆ ಸಾಕಾಗುವಷ್ಟಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಆ ಗಡುವು ಶನಿವಾರ ಮುಂಜಾನೆ ಮುಕ್ತಾಯಗೊಂಡಿದೆ.

ನಾಪತ್ತೆಯಾಗಿದ್ದ ಸಬ್‌ಮರೀನ್ ಈಗ ಮುಳುಗಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಯೂಡೊ ಮರ್ಗೋನೊ ಸುದ್ದಿಗಾರರಿಗೆ ತಿಳಿಸಿದರು. ಪತ್ತೆಯಾಗಿರುವ ವಸ್ತುಗಳು ಬೇರೊಂದು ಸಬ್‌ಮರೀನ್‌ನಿಂದ ಬರಲು ಸಾಧ್ಯವಿಲ್ಲ ಎಂದರು.

ಗ್ರೀಸ್ ಬಾಟಲಿ ಸೇರಿದಂತೆ ನಾಪತ್ತೆಯಾಗಿರುವ ಸಬ್‌ಮರೀನ್‌ಗೆ ಸೇರಿದೆ ಎಂದು ಹೇಳಲಾಗಿರುವ ಹಲವು ವಸ್ತುಗಳನ್ನು ನೌಕಾಪಡೆ ಅಧಿಕಾರಿಗಳು ಪ್ರದರ್ಶಿಸಿದರು. ಮುಸ್ಲಿಮರು ಬಳಸುವ ಪ್ರಾರ್ಥನಾ ಚಾಪೆಯೂ ಪತ್ತೆಯಾಗಿದೆ.

ಜರ್ಮನ್ ನಿರ್ಮಿತ ಸಬ್‌ಮರೀನ್ ಇಂಡೋನೇಶ್ಯದ ನೌಕಾಪಡೆ ಹೊಂದಿರುವ ಐದು ಸಬ್‌ಮರೀನ್‌ಗಳ ಪೈಕಿ ಒಂದಾಗಿದೆ. ಅದು ಬುಧವಾರ ಮುಂಜಾನೆ ಅಭ್ಯಾಸದ ವೇಳೆ ನಾಪತ್ತೆಯಾಗಿತ್ತು.

ಸಬ್‌ಮರೀನ್ 700 ಮೀಟರ್‌ಗೂ ಹೆಚ್ಚಿನ ಆಳಕ್ಕೆ ಕುಸಿದರೆ, ನೀರಿನ ಒತ್ತಡಕ್ಕೆ ಅದು ಒಡೆದು ಹೋಗಿರುವ ಸಾಧ್ಯತೆಯಿದೆ. ಈ ಆಳವು ಅದರ ಗರಿಷ್ಠ ಸಾಮರ್ಥ್ಯಕ್ಕಿಂತ ತುಂಬಾ ಹೆಚ್ಚಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News