ಪೂರ್ವ ಜೆರುಸಲೇಮ್: ಇಸ್ರೇಲ್ ಪೊಲೀಸ್, ಫೆಲೆಸ್ತೀನೀಯರ ನಡುವೆ ಘರ್ಷಣೆ

Update: 2021-04-24 17:45 GMT

ಜೆರುಸಲೇಮ್, ಎ. 24: ಆಕ್ರಮಿತ ಪೂರ್ವ ಜೆರುಸಲೇಮ್‌ನಲ್ಲಿ ಎರಡನೇ ರಾತ್ರಿಯಾದ ಶುಕ್ರವಾರವೂ ಇಸ್ರೇಲಿ ಪೊಲೀಸರು ಫೆಲೆಸ್ತೀನಿಯರೊಂದಿಗೆ ಸಂಘರ್ಷಕ್ಕಿಳಿದರು. ಮಾರ್ಚ್ ತಿಂಗಳ ಕೊನೆಯಲ್ಲಿ ಇಸ್ರೇಲ್‌ನ ಕಡುಬಲಪಂಥೀಯ ಯಹೂದಿ ಗುಂಪುಗಳು ಇಲ್ಲಿಗೆ ಆಗಮಿಸಿದ ಬಳಿಕ ಅಲ್ಲಿ ಸಂಘರ್ಷ ತಲೆದೋರಿದೆ. ಅವರು ಫೆಲೆಸ್ತೀನೀಯರನ್ನು ಪೀಡಿಸುತ್ತಿದ್ದಾರೆ ಎಂದು ಫೆಲೆಸ್ತೀನೀಯರು ಆರೋಪಿಸಿದ್ದಾರೆ.

ಪ್ರದೇಶದಲ್ಲಿ ಜನರು ಒಟ್ಟು ಸೇರಬಾರದು ಎಂಬ ಆದೇಶವನ್ನು ಫೆಲೆಸ್ತೀನಿಯರು ಪ್ರತಿಭಟಿಸುತ್ತಿದ್ದಾರೆ. ಗುರುವಾರ ರಾತ್ರಿ ಪೊಲೀಸರು ಮತ್ತು ಫೆಲೆಸ್ತೀನಿಯರ ನಡುವೆ ಘರ್ಷಣೆ ನಡೆದ ಬಳಿಕ, ಶುಕ್ರವಾರ ರಾತ್ರಿ ಹೊಸದಾಗಿ ಸಂಘರ್ಷ ನಡೆದಿದೆ.

ಗುರುವಾರದ ಘರ್ಷಣೆಯಲ್ಲಿ ಕನಿಷ್ಠ 105 ಮಂದಿ ಗಾಯಗೊಂಡಿದ್ದಾರೆ ಹಾಗೂ ಆ ಪೈಕಿ ಸುಮಾರು 20 ಮಂದಿಯನ್ನು ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಫೆಲೆಸೀನಿಯನ್ ರೆಡ್ ಕ್ರೆಸೆಂಟ್ ತಿಳಿಸಿದೆ.

ಅದೇ ವೇಳೆ, 20 ಪೊಲೀಸರು ಗಾಯಗೊಂಡಿದ್ದಾರೆ ಎಂದು ಇಸ್ರೇಲಿ ಪೊಲೀಸರು ಹೇಳಿದ್ದಾರೆ.

ಗುರುವಾರ, ಸಾಮಾನ್ಯವಾಗಿ ರಮಝಾನ್ ಅವಧಿಯಲ್ಲಿ ಫೆಲೆಸ್ತೀನೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಕೆಲವು ಸ್ಥಳಗಳಿಗೆ ಇಸ್ರೇಲಿ ಪೊಲೀಸರು ಪ್ರವೇಶ ನಿಷೇಧಿಸಿದ್ದರು. ಅದನ್ನು ಫೆಲೆಸ್ತೀನೀಯರು ಪ್ರತಿಭಟಿಸಿದಾಗ ಘರ್ಷಣೆ ತಲೆದೋರಿತು.

ಶುಕ್ರವಾರ ರಾತ್ರಿ ಅಲ್-ಅಕ್ಸಾ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೋಗುತ್ತಿದ್ದ ಫೆಲೆಸ್ತೀನೀಯರು ಮತ್ತು ಶಸ್ತ್ರಸಜ್ಜಿತ ಹಾಗೂ ಕುದುರೆಯ ಮೇಲಿದ್ದ ಪೊಲೀಸರ ನಡುವೆ ಘರ್ಷಣೆ ಸಂಭವಿಸಿತು. ಫೆಲೆಸ್ತೀನೀಯರನ್ನು ಚದುರಿಸಲು ಪೊಲೀಸರು ಸ್ಟನ್ ಗ್ರೆನೇಡ್‌ಗಳನ್ನು ಬಳಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News