ಮ್ಯಾನ್ಮಾರ್‌ನಲ್ಲಿ ತಕ್ಷಣ ಹಿಂಸೆ ಕೊನೆಗೊಳ್ಳಬೇಕು: ಆಸಿಯಾನ್ ಸಮ್ಮೇಳನ ಕರೆ

Update: 2021-04-24 17:46 GMT

ಜಕಾರ್ತ (ಇಂಡೋನೇಶ್ಯ), ಎ. 24: ಮ್ಯಾನ್ಮಾರ್‌ನಲ್ಲಿ ತಕ್ಷಣ ಹಿಂಸೆ ಕೊನೆಗೊಳ್ಳಬೇಕು ಎಂದು ಒತ್ತಾಯಿಸುವ ಐದು ಅಂಶಗಳ ಹೇಳಿಕೆಯೊಂದನ್ನು ಅಸೋಸಿಯೇಶನ್ ಆಫ್ ಸೌತ್‌ ಈಸ್ಟ್ ಏಶ್ಯನ್ ನೇಶನ್ಸ್ (ಆಸಿಯಾನ್) ಶನಿವಾರ ಬಿಡುಗಡೆಗೊಳೀಸಿದೆ ಹಾಗೂ ದೇಶದಲ್ಲಿರುವ ಎಲ್ಲ ಪಕ್ಷಗಳು ಗರಿಷ್ಠ ಸಂಯಮ ವಹಿಸಬೇಕು ಎಂದು ಕರೆ ನೀಡಿದೆ.

ಸೇನೆಯು ಫೆಬ್ರವರಿ 1ರಂದು ಕ್ಷಿಪ್ರಕ್ರಾಂತಿ ನಡೆಸಿ ನಾಗರಿಕ ನಾಯಕಿ ಆಂಗ್ ಸಾನ್ ಸೂ ಕಿಯ ಸರಕಾರವನ್ನು ಕಿತ್ತೊಗೆದ ಬಳಿಕ ಆಸಿಯಾನ್ ಸಂಘಟನೆಯ ಸದಸ್ಯ ದೇಶವಾಗಿರುವ ಮ್ಯಾನ್ಮಾರ್‌ನಲ್ಲಿ ಅಶಾಂತಿ ನೆಲೆಸಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಮರಳಬೇಕೆಂದು ಆಗ್ರಹಿಸಿ ಸಮಾಜದ ಎಲ್ಲ ವರ್ಗಗಳು ಸೇನೆಯ ವಿರುದ್ಧ ಬಂಡೆದ್ದಿವೆ.

ಜಕಾರ್ತದಲ್ಲಿ ಶನಿವಾರ ನಡೆದ ಆಸಿಯಾನ್ ತುರ್ತು ಸಮ್ಮೇಳನದ ಬಳಿಕ ಬಿಡುಗಡೆ ಮಾಡಲಾದ ಆಸಿಯಾನ್ ದಾಖಲೆಯು, ಬಿಕ್ಕಟ್ಟಿನ ನಿವಾರಣೆಗೆ ರಚನಾತ್ಮಕ ಮಾತುಕತೆಯನ್ನು ನಡೆಸುವಂತೆ ಕರೆ ನೀಡಿದೆ.

ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಪಕ್ಷಗಳು ಶಾಂತಿಯುತ ಪರಿಹಾರಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅದು ಹೇಳಿದೆ.

ಆಸಿಯಾನ್ ಅಧ್ಯಕ್ಷರ ವಿಶೇಷ ರಾಯಭಾರಿಯೊಬ್ಬರು ಆಸಿಯಾನ್ ಮಹಾಕಾರ್ಯದರ್ಶಿಯ ನೆರವಿನೊಂದಿಗೆ ಸಂಧಾನ ಪ್ರಕ್ರಿಯೆಯಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ದಾಖಲೆ ಹೇಳಿದೆ.

ತಾನು ಮಾನವೀಯ ನೆರವು ನೀಡುವುದಾಗಿಯೂ ಆಸಿಯಾನ್ ತಿಳಿಸಿದೆ. ಸಂಬಂಧಿತ ಎಲ್ಲ ಪಕ್ಷಗಳನ್ನು ಭೇಟಿಯಾಗಲು ವಿಶೇಷ ರಾಯಭಾರಿ ಮತ್ತು ಆಸಿಯಾನ್ ನಿಯೋಗವು ಮ್ಯಾನ್ಮಾರ್‌ಗೆ ಭೇಟಿ ನೀಡಲಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಇಂಡೋನೇಶ್ಯ ಅಧ್ಯಕ್ಷ ಜೊಕೊ ವಿಡೋಡೊ, ಮ್ಯಾನ್ಮಾರ್ ಸೇನೆಯು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಬೇಕು ಹಾಗೂ ನಾಗರಿಕರ ವಿರುದ್ಧದ ಹಿಂಸಾಚಾರವನ್ನು ನಿಲ್ಲಿಸಬೇಕು ಎಂದು ಹೇಳಿದರು.

ಶನಿವಾರ ನಡೆದ ಆಸಿಯಾನ್ ಸಮಾವೇಶದಲ್ಲಿ ಮ್ಯಾನ್ಮಾರ್ ಸೇನಾ ಮುಖ್ಯಸ್ಥ ಹಾಗೂ ಕ್ಷಿಪ್ರ ಕ್ರಾಂತಿಯ ನಾಯಕ ಮಿನ್ ಆಂಗ್ ಹಲಯಂಗ್ ಭಾಗವಹಿಸಿದ್ದಾರೆ. ಇದು ಕ್ಷಿಪ್ರಕ್ರಾಂತಿಯ ಬಳಿಕ ಮ್ಯಾನ್ಮಾರ್ ಸೇನಾ ಮುಖ್ಯಸ್ಥರ ಮೊದಲ ಬಲ್ಲ ವಿದೇಶ ಪ್ರವಾಸವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News