ಉಡುಪಿಯಲ್ಲಿ ಮಧ್ಯಾಹ್ನ 12.29ಕ್ಕೆ ಶೂನ್ಯ ನೆರಳಿನ ದಿನ ವೀಕ್ಷಣೆ
Update: 2021-04-25 17:44 IST
ಉಡುಪಿ, ಎ.25: ಶೂನ್ಯ ನೆರಳಿನ ದಿನವನ್ನು ಮಂಗಳೂರಿನಲ್ಲಿ ಎ24ರಂದು ಮಧ್ಯಾಹ್ನ 12.28ಕ್ಕೆ ವೀಕ್ಷಿಸಿದರೆ, ಉಡುಪಿಯಲ್ಲಿ ಎ.25ರಂದು ಮಧ್ಯಾಹ್ನ 12.29ಕ್ಕೆ ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸದಸ್ಯರು ವೀಕ್ಷಿಸಿದರು.
ಈ ಶೂನ್ಯ ನೆರಳಿನ ಕ್ಷಣವನ್ನು ಮಂಗಳೂರಿನಿಂದ 12.15ರಿಂದ 12.35ರ ತನಕ ಯೂ ಟ್ಯೂಬ್ ಚಾನೆಲ್ ನಲ್ಲಿ ಹಾಗೂ ಉಡುಪಿಯಿಂದ ಫೇಸ್ಬುಕ್ ಪುಟದಲ್ಲಿ ನೇರ ಪ್ರಸಾರ ಮಾಡಲಾಯಿತು. ನೇರ ಪ್ರಸಾರವನ್ನು ರಾಜ್ಯಾದ್ಯಂತ ನೂರಾರುಮಂದಿ ವೀಕ್ಷಿಸಿ, ನೆರಳು ಕಣ್ಮರೆಯಾಗುವುದನ್ನು ಕಣ್ತುಂಬಿಕೊಂಡರು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ಮನೆಯಿಂದಲೇ ವಿವಿಧ ಗೃಹೋಪಯೋಗಿ ವಸ್ತುಗಳನ್ನು ಬಳಸಿಕೊಂಡು ಶೂನ್ಯ ನೆರಳನ್ನು ಗಮನಿಸಿದ್ದಾರೆ. ಕುಂದಾಪುರ ಹಾಗೂ ಬ್ರಹ್ಮಾವರದ ಜನರು ಈ ವಿದ್ಯಮಾನವನ್ನು ಏಪ್ರಿಲ್ 26ರಂದು 12.20 ರಿಂದ 12.30 ರ ಒಳಗೆ ವೀಕ್ಷಿಸಬಹುದು ಎಂದು ಸಂಘ ತಿಳಿಸಿದೆ.