ಉಡುಪಿ : ಸ್ವಂತ ದುಡಿಮೆ ಹಣದಿಂದ ಅನ್ನ ಹಂಚಿದ ಯುವಕರು
ಉಡುಪಿ : ಕಳೆದ ಬಾರಿ ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಸ್ವಂತ ದುಡಿಮೆ ಹಣದಿಂದ ಅನ್ನ ಆಹಾರ ಇಲ್ಲದೆ ಪರಿತಪಿಸುತ್ತಿದ್ದ ಅಸಹಾಯಕರಿಗೆ ಆಹಾರ ವಿತರಿಸಿದ್ದ ಯುವಕರ ಪಡೆ, ಈ ಬಾರಿಯ ಶನಿವಾರ ಮತ್ತು ರವಿವಾರದ ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲೂ ಊಟ ಹಂಚುವ ಕೆಲಸ ಮಾಡಿದ್ದಾರೆ.
ಅಂಬಲಪಾಡಿಯ ಸಚಿನ್, ಶ್ರೀಶ, ಸಂದೀಪ್ ಮತ್ತು ಸಂದೇಶ್ ಎಂಬ ವರು ತಮ್ಮ ಸ್ವಂತ ದುಡಿಮೆ ಹಣದಿಂದ ಮನೆಯಲ್ಲಿ ಊಟ ತಯಾರಿಸಿ, ಈ ಎರಡು ದಿನ ಉಡುಪಿ, ಮಲ್ಪೆ, ಮಣಿಪಾಲದಲ್ಲಿ 100ಕ್ಕೂ ಅಧಿಕ ಅಸಹಾಯ ಕರಿಗೆ ಮಧ್ಯಾ್ನ, ರಾತ್ರಿಯ ಊಟವನ್ನು ವಿತರಿಸಿದ್ದಾರೆ.
ಲಾರಿ ಚಾಲಕರಿಗೆ ಊಟ, ನೀರು ವಿತರಣೆ
ಕರ್ಫ್ಯೂನಿಂದಾಗಿ ದಾರಿ ಮಧ್ಯೆ ಸಿಲುಕಿರುವ ನೂರಾರು ಮಂದಿ ಲಾರಿ ಚಾಲಕರಿಗೆ ಯುವಕರ ತಂಡ ಆಹಾರ ನೀರು ನೀಡುವ ಮಾನವೀಯ ಕಾರ್ಯ ವನ್ನು ಶನಿವಾರ ಮತ್ತು ರವಿವಾರ ರಾತ್ರಿ ನಡೆಸಿತು.
ಫೈರೋಝ್ ಮನ್ಸೂರ್, ಮೌಲಾನ ಶಕೀಲ್, ಅಬ್ರಾರ್, ನದೀಮ್ , 24x 7 ಆಂಬ್ಯುಲೆನ್ಸ್ ಇದರ ಇಬ್ರಾಹಿಂ ಗಂಗೊಳ್ಳಿ, ಲಿಪ್‌ಟನ್ ಒಲಿವೆರ ಸಹಿತ ಕೆಲವು ಯುವಕರು ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಸರ್ಕಲ್‌ನಲ್ಲಿ ಶನಿವಾರ ರಾತ್ರಿ ಸುಮಾರು 120 ಮತ್ತು ರವಿವಾರ ಸುಮಾರು 150 ಲಾರಿ ಚಾಲರಿಗೆ ಊಟ ಹಾಗೂ ನೀರು ವಿತರಿಸಿದರು.
ಅಸಹಾಯಕರಿಗೆ ಊಟ ವಿತರಣೆ
ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಬಸ್ಸು ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಆಶ್ರಯ ಪಡೆದಿರುವ ಅಸಹಾಯಕರಿಗೆ, ಅನಾರೋಗ್ಯ ಪೀಡಿತರಿಗೆ, ಮಾನಸಿಕ ಅಸ್ವಸ್ಥರಿಗೆ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ರವಿವಾರ 150 ಊಟ, ಜೊತೆಯಲ್ಲಿ ಶುದ್ಧ ಕುಡಿಯುವ ನೀರಿನ ಬಾಟಲ್ ವಿತರಿಸಿದರು.